ಚಿಕ್ಕಮಗಳೂರು : ಚಿಕಿತ್ಸೆಗೆಂದು ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಬಂದಾಗ ಎರಡು ಚಿನ್ನದ ಬಳೆಗಳು ಕಾಣಿಯಾಗಿವೆ ಎಂದು ಮೃತರ ಮಗ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಭಾನುವಾರ ಕಾರ್ಯಕ್ರಮಯೊಂದರ ವೇಳೆ ಲಕ್ಷ್ಮಿದೇವಿ ಎಂಬುವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆತಂದಿದ್ದರು. ತಕ್ಷಣ ಆಸ್ವತ್ರೆಯ ಸಿಬ್ಬಂದಿ ಲಕ್ಷಿದೇವಿ ಅವರನ್ನು ತುರ್ತು ಚಿಕಿತ್ಸಾ ವಿಭಾಗದ ಒಳಗೆ ಕರೆದುಕೊಂಡು ಹೋಗಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಲಕ್ಷ್ಮಿದೇವಿ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸ್ವಲ್ಪ ಸಮಯದ ಬಳಿಕ ಮೃತ ದೇಹವನ್ನು ಹೊರ ತಂದಾಗ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆಗಳ ಪೈಕಿ ಎರಡು ಬಳೆಗಳು ಇಲ್ಲದಿರುವುದು ಕುಟುಂಬಸ್ಥರು ಗಮನಕ್ಕೆ ಬಂದಿದೆ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಲಕ್ಷ್ಮಿದೇವಿ ಅವರ ಸೊಸೆ ವಿಚಾರಿಸಿದಾಗ ತಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
ತುರ್ತ ವಿಭಾಗದ ಒಳಗೆ ಕರೆದುಕೊಂಡು ಹೋಗುವಾಗ ಲಕ್ಷ್ಮಿ ದೇವಿ ಅವರ ಎರಡೂ ಕೈಗಳಲ್ಲಿ ತಲಾ ಎರಡರಂತೆ ಒಟ್ಟು ನಾಲ್ಕು ಚಿನ್ನದ ಬಳೆಗಳನ್ನು ಧರಿಸಿದ್ದರು. ಈ ಪೈಕಿ ಎರಡು ಬಳೆಗಳು ಕೆಲವೇ ಗಂಟೆಗಳಲ್ಲಿ ಕಾಣೆಯಾಗಲು ಹೇಗೆ ಸಾಧ್ಯ? ತುರ್ತು ಚಿಕಿತ್ಸಾ ವಿಭಾಗದ ಒಳಗೆ ಆಸ್ಪತ್ರೆ ಸಿಬ್ಬಂದಿ ಕಳವು ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿದೇವಿ ಅವರ ಮಗ ಶಮಂತ್ ದೂರು ನೀಡಿದ್ದಾರೆ. ಕಾಣೆಯಾದ ಎರಡು ಚಿನ್ನದ ಬಳೆಗಳು ಸುಮಾರು 35 ರಿಂದ 40 ಗ್ರಾಂ ತೂಕವಿದ್ದು, 2 ಲಕ್ಷ ರೂ. ಬೆಲೆ ಬಾಳುತ್ತವೆ. ಕರ್ತವ್ಯದಲ್ಲಿದ್ದ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಣೆ ಮಾಡಿ, ಸಿಸಿ ಕ್ಯಾಮರಾವನ್ನು ಪರಿಶೀಲಿಸಿ, ಕಳ್ಳತನವಾದ ಚಿನ್ನದ ಬಳೆಗಳನ್ನು ಪತ್ತೆ ಮಾಡಿ ಕೊಡಬೇಕು. ಅಲ್ಲದೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ. ಈ ದೂರಿನ ಮೇರೆಗೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ :ಕೆಲಸದಾತನ ನಂಬಿ ಮೋಸಹೋದ ಮಾಲೀಕ: ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ, ನಗದು ಮಾಯ