ಚಿಕ್ಕಮಗಳೂರು:ಆತನಿಗೆ ರಸ್ತೆಯಲ್ಲಿ ಓಡಾಡುವ ಜನರನ್ನು ಕಂಡರೇ ಸಂತೋಷವೋ ಸಂತೋಷ. ಆದರೆ, ಅವನನ್ನು ಬಿಟ್ಟರೇ ಹಿಡಿಯುವುದೇ ಕಷ್ಟ. ಇವನ ಕಾಟ ತಡೆಯಲಾರದೇ ಕಳೆದ 30 ವರ್ಷಗಳಿಂದ ತನ್ನ ಸಹೋದರ ಕಾಲಿಗೆ ಸರಪಳಿಯಿಂದ ಕಟ್ಟಾಕಿದ್ದಾನೆ. ಚೈನ್ ಇರುವಷ್ಟು ಉದ್ದವೇ ಆತನ ಬದುಕು. ಊಟ-ತಿಂಡಿ ಎಲ್ಲಾ ಅಲ್ಲೇ.
ತರೀಕೆರೆ ತಾಲೂಕಿನ ಸಂತವೇರಿ ಗ್ರಾಮದ ಈ ಯುವಕನ ಹೆಸರು ಸುಹೇಬ್. ಮಾನಸಿಕ ಅಸ್ವಸ್ಥ. ಮೂರು ದಶಕಗಳಿಂದ ಈತನ ಬದುಕು ಹೀಗೆ. ಕಾಲಿಗೆ ಕಟ್ಟಿರುವ ಸರಪಳಿ ಬಿಚ್ಚುವಂತಿಲ್ಲ. ಬಿಚ್ಚಿದರೆ ಅವನ ಹಿಂದೆಯೇ ಓಡಬೇಕು. ಚಿಕ್ಕಂದಿನಲ್ಲಿ ಕಣ್ಣು ಕಾಣುತ್ತಿತ್ತು. ಈಗ ಸರಿಯಾಗಿ ಕಾಣಿಸುತ್ತಿಲ್ಲ. ಹಿಂದೊಮ್ಮೆ ಸರಪಳಿ ಬಿಚ್ಚಿದ್ದಾಗ ಓಡಿ ಹೋಗಿ ಕೆರೆಗೆ ಬಿದ್ದಿದ್ದ. ಬಟ್ಟೆ ತೊಳೆಯುತ್ತಿದ್ದ ಅಜ್ಜಿಯಿಂದ ಪ್ರಾಣ ಉಳಿದಿತ್ತು.
ಇದನ್ನೂ ಓದಿ...ಚಿಕ್ಕಮಗಳೂರಿನ ಶಾಲಾ ಆವರಣದಲ್ಲಿ ಸುಳಿದಾಡುತ್ತಿದ್ದ ಕಾಳಿಂಗ ಸೆರೆ
ಅಪ್ಪ - ಅಮ್ಮ ಯಾರೂ ಇಲ್ಲ. ತಮ್ಮನೊಬ್ಬನಿದ್ದಾನೆ. ಇದ್ದ ಮಾನಸಿಕ ಅಸ್ವಸ್ಥ ಅಣ್ಣನೂ ತೀರಿಕೊಂಡಿದ್ದಾನೆ. ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಲಾಗಿತ್ತು. ವೈದ್ಯರು ಪರಿಶೀಲನೆಯಲ್ಲಿ ಇರಲಿ ಎಂದೂ ಹೇಳಿದ್ದರು. ಆದರೆ, ಆಸ್ಪತ್ರೆಯಲ್ಲಿ ಜನರನ್ನು ಕಂಡು ಕೂಗಾಡುತ್ತಿದ್ದ ಕಾರಣಕ್ಕೆ ವಾಪಸ್ ಕರೆತಂದು ಮತ್ತೆ ಕಟ್ಟಿ ಹಾಕಿದ್ದಾರೆ. ಈಗ 18 ವರ್ಷದ ತಮ್ಮನೇ 10 ವರ್ಷಗಳಿಂದ ಈತನಿಗೆ ಅಮ್ಮನಾಗಿದ್ದು, ಪೋಷಣೆ ಮಾಡುತ್ತಿದ್ದಾನೆ.
ಮಾನಸಿಕ ಅಸ್ವಸ್ಥನ ಜೀವನದಲ್ಲಿ 'ಹೊಸ ಬೆಳಕು' ಮೂಡಿಸುತ್ತಿರುವ ಸಹೋದರ ಸುಹೇಬ್ ತಮ್ಮನ ಹೆಸರು ಅಬ್ದುಲ್ ರೆಹಮಾನ್. ಈತ ಕೂಡ ಅದೇ ಗ್ರಾಮದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಮೂರು ಸಾವಿರ ಸಂಪಾದಿಸುತ್ತಿದ್ದಾನೆ. ಬಂದ ಹಣದಲ್ಲಿ ಅಣ್ಣನನ್ನು ಸಾಕಿ, ತಾನೂ ಬದುಕುತ್ತಿದ್ದಾನೆ. ಬೆಳಗ್ಗೆದ್ದು ಅಡುಗೆ ಮಾಡಿ ಅಣ್ಣನಿಗೆ ತಿನ್ನಿಸಿದ ಬಳಿಕ ಕೆಲಸಕ್ಕೆ ಹೋಗುತ್ತಾನೆ. ಮಧ್ಯಾಹ್ನ ಬಂದು ಅಣ್ಣನಿಗೆ ಊಟ ಮಾಡಿಸುತ್ತಾನೆ. ಮನೆಯ ಕೆಲಸವನ್ನೇ ಮಾಡುತ್ತಾನೆ.
18 ವರ್ಷಗಳಿಂದ ಅಣ್ಣನ ಸೇವೆ ಮಾಡಿರುವ ರೆಹಮಾನ್‍ಗೆ ಈಗೀಗ ಆರೋಗ್ಯ ಹದಗೆಡುತ್ತಿದೆ. ಆತ ಕೂಡ ನಿತ್ಯ ಮಾತ್ರೆ ನುಂಗಬೇಕು. ಸ್ಥಳೀಯರೂ ಕೈಲಾದಷ್ಟು ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ. 30 ವರ್ಷಗಳಿಂದ ಹೀಗೆ ಒಂದೇ ಜಾಗದಲ್ಲಿ ಬದುಕುವುದು ನಿಜಕ್ಕೂ ಅಸಾಧ್ಯ. ಅದಕ್ಕಿಂತ ಮಿಗಿಲಾಗಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು ಅಸ್ವಸ್ಥ ಜೀವನದಲ್ಲಿ 'ಹೊಸ ಬೆಳಕು' ಮೂಡಿಸುತ್ತಿರುವ ಸಹೋದರನಿಗೆ ಹ್ಯಾಟ್ಸಾಪ್ ಹೇಳಲೇಬೇಕು.