ಚಿಕ್ಕಮಗಳೂರು :ಅದು ಕುಗ್ರಾಮ. ಎತ್ತ ಕಣ್ಣು ಹಾಯಿಸಿದರೂ ದಟ್ಟ ಅರಣ್ಯವೇ ಕಾಣುತ್ತೆ. ಇದರ ನಡುವೆಯೇ ನೂರಾರು ವರ್ಷಗಳಿಂದ ಜನರ ಬದುಕು ಸಾಗುತ್ತಿದೆ. ಗ್ರಾಮದ ಮುಂದೆ ಹಳ್ಳವೊಂದು ಸದಾಕಾಲ ಹರಿಯುತ್ತೆ. ಅದನ್ನ ದಾಟಿದ್ರೆ ಮಾತ್ರ ಪಟ್ಟಣಕ್ಕೆ ಹೋಗೋಕೆ ಸಾಧ್ಯ. ಆದರೆ, ಮೂರು ವರ್ಷದ ಹಿಂದೆಯೇ ಕೊಚ್ಚಿ ಹೋಗಿದ್ದ ಸೇತುವೆಗೆ ಇನ್ನೂ ಮರು ಜೀವ ಬಂದಿಲ್ಲ. ಈಗ ಮಳೆಗಾಲ ಶುರುವಾಗ್ತಾ ಇದ್ದಂತೆ ಹಳ್ಳದ ನೀರು ಏರಿಕೆಯಾದ್ರೆ ತಿಂಗಳುಗಟ್ಟಲೇ ಜಲದಿಗ್ಬಂಧನದ ಭೀತಿ ಕಳಸ ತಾಲೂಕಿನ ಕಾರ್ಲೇ ಗ್ರಾಮಸ್ಥರಿಗೆ ಎದುರಾಗಿದೆ.
ಕಾರ್ಲೇ ಗ್ರಾಮ ಸುಮಾರು 30 ಮನೆಗಳಿಂದ ಕೂಡಿದೆ. ಇಲ್ಲಿನ ಜನ ಪಟ್ಟಣಕ್ಕೆ ಹೋಗಬೇಕಾದ್ರೆ ಹಳ್ಳ ದಾಟಲೇಬೇಕು. ಆದ್ರೆ, ಸೇತುವೆ ಸರಿ ಇಲ್ಲದ ಕಾರಣ ಮರದ ದಿಮ್ಮಿಯನ್ನು ಅವರು ಆಶ್ರಯಿಸಬೇಕಾದ ಸ್ಥಿತಿ ಬಂದಿದೆ. ಈ ಸಮಸ್ಯೆ ಶುರುವಾಗಿ ಮೂರು ವರ್ಷವೇ ಕಳೆದಿದೆಯಂತೆ. ಸದ್ಯಕ್ಕೆ ಬೇಸಿಗೆ ಇರುವುದರಿಂದ ಜನ ಹಳ್ಳ ದಾಟುತ್ತಿದ್ದಾರೆ. ವರುಣನ ಅಬ್ಬರಕ್ಕೆ ಇನ್ನೇನೂ ತಿಂಗಳು ಮಾತ್ರ ಬಾಕಿ ಇದೆ. ಇದು ಜನರ ಎದೆಯಲ್ಲಿ ನಡುಕ ಹುಟ್ಟಲು ಕಾರಣವಾಗಿದೆ.