ಚಿಕ್ಕಮಗಳೂರು:ರಾಜ್ಯ ರಾಜಕಾರಣದಲ್ಲಿ ಮುಂದಿನ ಸಿಎಂ ಬಗ್ಗೆ ಈಗಾಗಲೇ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಈಗ ಬಿಜೆಪಿ ಪಕ್ಷದಲ್ಲೂ ಮುಂದಿನ ಸಿಎಂ ಬಗ್ಗೆ ಚರ್ಚೆಯಾಗಲು ಪ್ರಾರಂಭವಾಗಿದೆ. ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿ.ಟಿ. ರವಿ ಆಗಬೇಕು ಎನ್ನುವುದು ಕಾರ್ಯಕರ್ತರ ಒತ್ತಾಸೆಯಾಗಿದೆ. ಇತ್ತೀಚಿಗೆ ಚಿಕ್ಕಮಗಳೂರಿನಲ್ಲಿ ಕೆಲವು ಕಾರ್ಯಕರ್ತರು ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ ಎನ್ನುವ ಘೋಷಣೆ ಕೇಳಿಬಂದಿದೆ. ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಸ್ವತಃ ಶಾಸಕರೇ ಮುಖ್ಯಮಂತ್ರಿ ಆಗುವ ಇಂಗಿತ ವ್ಯಕ್ತಪಡಿಸಿದ್ದರು.
ಅದಕ್ಕೆ ಪೂರಕವಾಗಿ ಕಡೂರು ತಾಲೂಕಿನ ನಿಡಘಟ್ಟದಲ್ಲಿ ನಡೆಯುತ್ತಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಕೆ.ಎಸ್. ಈಶ್ವರಪ್ಪ ಸಹಮತ ವ್ಯಕ್ತಪಡಿಸಿದ ಅವರು, ''ಸಿ.ಟಿ. ರವಿ ಮುಂದಿನ ಮುಖ್ಯಮಂತ್ರಿಯಾಗಲಿ'' ಎಂದು ಘೋಷಿಸಿದರು. ಸಿ.ಟಿ. ರವಿ ಅವರನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು. ಈ ವೇಳೆ ಕಾರ್ಯಕರ್ತರು ಸಂತೋಷದಿಂದ ಸಂಭ್ರಮಿಸಿದ್ದು, ಈಶ್ವರಪ್ಪ ಹಾಗೂ ಸಿ ಟಿ ರವಿಗೆ ಜೈಕಾರ ಕೂಗಿದ್ದಾರೆ. ''ಸಿ.ಟಿ. ರವಿ ಅವರನ್ನು ಚಿಕ್ಕಮಗಳೂರು ಶಾಸಕರಾಗಿ ಪಡೆದಿರುವುದು ನಮ್ಮ ಪುಣ್ಯ. ತನ್ನ ಕ್ಷೇತ್ರ ಬಿಟ್ಟು ಪೂರ್ಣ ಬಹುಮತದ ಸರ್ಕಾರಕ್ಕೆ ಓಡಾಡುತ್ತಿದ್ದಾರೆ. ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿರೋದು ನಮ್ಮ ಹೆಮ್ಮೆ. ಸಿ.ಟಿ. ರವಿ ಹಿಂದೂ ಹುಲಿ ಎಂದೇ ಖ್ಯಾತಿಯಾಗಿದ್ದಾರೆ'' ಎಂದು ಈಶ್ವರಪ್ಪ ಬಣ್ಣಿಸಿದರು.
ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದು ಬಿಜೆಪಿಯ ನಿಲುವು:''ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದು ಬಿಜೆಪಿಯ ನಿಲುವು ಆಗಿದೆ. ಶೇ. 2ರಷ್ಟು ಲಿಂಗಾಯತರಿಗೆ ಶೇ.2ರಷ್ಟು ಒಕ್ಕಲಿಗರಿಗೆ ನೀಡಿದ್ದು ಬಿಜೆಪಿ ಪಕ್ಷದ ಬದ್ಧತೆ'' ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು. ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮುಸ್ಲಿಮರ ಮೀಸಲಾತಿ ರದ್ದು ಮಾಡಿದರ ಬಗ್ಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಆದರೆ, ಇದನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿಲ್ಲ. ಈ ಬಗ್ಗೆ ನಾವು ಸುಪ್ರೀಂ ಕೋರ್ಟ್ನಲ್ಲಿ ವಾದ ಮಾಡುತ್ತೇವೆ. ಜನಸಂಖ್ಯೆ ಆಧಾರದ ಮೇಲೆ ಈ ತೀರ್ಮಾನ ಮಾಡಿದ್ದೇವೆ. ಸುಪ್ರೀಂ ಕೋರ್ಟ್ನಲ್ಲಿ ತಡೆಯಾಜ್ಞೆ ತೆರವುಗೊಂಡ ಬಳಿಕ ನ್ಯಾಯ ಪಡೆಯುತ್ತೇವೆ'' ಎಂದರು.
ಇದನ್ನೂ ಓದಿ:ಮೀಸಲಾತಿ ಹಂಚಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರದಿಂದ ಗಿಮಿಕ್: ದಿನೇಶ್ ಗುಂಡೂರಾವ್