ಚಿಕ್ಕಮಗಳೂರು/ದಾವಣಗೆರೆ:ರಾಜ್ಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆ ಪ್ರವಾಸೋದ್ಯಮ ಸಚಿವ ಸಿ ಟಿ ರವಿ ನೇತೃತ್ವದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ ಟಿ ರವಿ, ಕಾಂಗ್ರೆಸ್ ಮತ್ತು ಜನತಾ ದಳದ ಮುಖಂಡರು ಅನರ್ಹರನ್ನು ಸೋಲಿಸಿ ಎಂದು ಕರೆ ನೀಡಿದ್ದರು. ಡಿಸೆಂಬರ್ 9 ರ ನಂತರ ಯಡಿಯೂರಪ್ಪ ನವರ ಸರ್ಕಾರ ಪತನವಾಗುತ್ತೆ ಎಂದಿದ್ದರು. ತಮ್ಮ ಅಭಿಮಾನಿಯಿಂದ ಸಿದ್ದರಾಮಯ್ಯ ಹೌದು ಹುಲಿಯಾ ಎನ್ನಿಸಿಕೊಂಡಿದ್ದರು. ಆದ್ರೆ ಹುಲಿರಾಯನ ಕಾಲ ಇದಲ್ಲಾ, ಈಗ ರಾಜಾ ಹುಲಿಯ ದರ್ಬಾರ್ ಎಂದರು. ಈಗ ರಾಜಾಹುಲಿ ಸಿದ್ದರಾಮಯ್ಯ ಅಲ್ಲ. ಕುಮಾರಸ್ವಾಮಿಯೂ ಅಲ್ಲ, ಅದು ಯಡಿಯೂರಪ್ಪ ಮಾತ್ರ, ಈಗ ಜನ ಮನ್ನಣೆ ರಾಜ್ಯದ ಬಿಜೆಪಿಗೆ ಸಂದಿದೆ ಎಂದರು.
ರಾಜ್ಯ ಉಪ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು ದಾವಣಗೆರೆ ಚಿಕ್ಕಮಗಳೂರಿನಲ್ಲಿ ಸಂಭ್ರಮಾಚರಣೆ ದಾವಣಗೆರೆಯಲ್ಲೂ ಸಂಭ್ರಮಾಚರಣೆ:
ಹಾಗೆಯೇ ದಾವಣಗೆರೆ ಜಿಲ್ಲೆಯಲ್ಲಿಯೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಿಸಿದರು. ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಹೌದು ಹುಲಿಯಾ ಬಿಎಸ್ವೈ ಎಂದು ಘೋಷಣೆ ಕೂಗಿ ಸಂಭ್ರಮಪಟ್ಟರು.
ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೆಲವೇ ಸೀಟುಗಳು ಕಡಿಮೆ ಆಗಿದ್ದವು. ಆದರೆ ಜನರ ಆದೇಶ ಬಿಜೆಪಿಗೆ ಇತ್ತು. ಕಾಂಗ್ರೆಸ್ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡು ದುರಾಡಳಿತ ನಡೆಸಿದ್ದವು. ಇದನ್ನೂ ಮನಗಂಡು 17 ಶಾಸಕರು ರಾಜೀನಾಮೆ ನೀಡಿ ಬಿಎಸ್ವೈ ಬೆಂಬಲಕ್ಕೆ ನಿಂತಿದ್ದರು, ಈಗ ಜನ ಅವರ ಪರವಾಗಿ ನಿಂತಿದ್ದಾರೆ. ಅತೀ ಹೆಚ್ಚು ಅಂತರದಲ್ಲಿ ಗೆಲ್ಲುವ ಮೂಲಕ ಜನ ಸುಭದ್ರ ಸರ್ಕಾರ ನೀಡಿದ್ದಾರೆ ಎಂದರು.