ಚಿಕ್ಕಮಗಳೂರು:ಪ್ರಜಾಪ್ರಭುತ್ವದಲ್ಲಿ ಒಂದು ಹೆಜ್ಜೆ ಹಿಂದೆ ಇಡೋದನ್ನು ನಾವು ಅಪಮಾನ ಅಂತ ಭಾವಿಸಲ್ಲ. ಮೋದಿ ಪ್ರಜಾಪ್ರಭುತ್ವವಾದಿ, ಸರ್ವಾಧಿಕಾರಿಯಾಗಿದ್ರೆ ಕಾಯ್ದೆ ಹಿಂತೆಗೆದುಕೊಳ್ಳುತ್ತಿರಲಿಲ್ಲ. ಕಾಯ್ದೆ ವಿರೋಧಿಸಿದ ಜನರೇ ಕಾಯ್ದೆ (Farm Laws) ಪರ ಮಾತನಾಡುವ ದಿನ ಬರುತ್ತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (C.T.Ravi) ಹೇಳಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆ ರದ್ದುಗೊಳಿಸಿರುವ (Repeal of three farm laws) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆತಂಕವಾದಿಗಳು ಕೃಷಿ ಕಾಯ್ದೆಯನ್ನ ತಪ್ಪಾಗಿ ಬಿಂಬಿಸಿದ್ದರು. ಕಾಂಗ್ರೆಸ್ ಸೇರಿ ರಾಜಕೀಯ ಪಕ್ಷಗಳೇ ಕೃಷಿ ಕಾಯ್ದೆ ತರಬೇಕು ಎಂದಿದ್ದರು. ಮಾರುಕಟ್ಟೆ ಮುಕ್ತ ಆಗಬೇಕು ಅಂತಿದ್ದರು. ರಾಜಕೀಯ ಕಾರಣಕ್ಕೆ ವಿರೋಧಿಸಿದರು. ಪಂಜಾಬ್‍ನಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಕಾಯ್ದೆಯನ್ನು ತಪ್ಪಾಗಿ ಅರ್ಥೈಸಿದರು. ದೇಶದ ಜನಕ್ಕೆ ಮನವರಿಕೆ ಮಾಡುವಲ್ಲಿ ನಾವು ಯಶಸ್ವಿಯಾದೆವು. ಪಂಜಾಬ್, ಹರಿಯಾಣದಲ್ಲಿ ಜನರ ಮನವರಿಕೆ ಪೂರ್ಣ ಪ್ರಮಾಣದಲ್ಲಿ ಆಗಲಿಲ್ಲ. ರೈತ ಸಂಘಟನೆಗಳೇ ಮಾರುಕಟ್ಟೆ ಮುಕ್ತ ಆಗಬೇಕೆಂದು ಆಗ್ರಹದಿಂದ ಭಾಷಣ ಮಾಡ್ತಿದ್ರು. ಕೆಲ ರೈತ ಸಂಘಟನೆಗಳು ಮಾರುಕಟ್ಟೆ ಮುಕ್ತ ಮಾಡಿದ ಮೋದಿ ವಿರುದ್ಧ ಪ್ರತಿಭಟಿಸಿದ್ರು ಎಂದು ಹೇಳಿದರು.