ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾರದಾ ಮಠಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿ ನೀಡಲಿರುವ ವಿಚಾರ ರಾಜಕೀಯ ವಲಯದಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಶೃಂಗೇರಿ ಮಠದ ಶ್ರೀಗಳ ಭೇಟಿಗೆ ಸಮಯಾವಕಾಶವನ್ನು ಜೆ ಪಿ ನಡ್ಡಾ ಕೇಳಿರುವ ವಿಚಾರ ಬಿಜೆಪಿ ಮೂಲಗಳಿಂದ ತಿಳಿದುಬಂದಿದೆ. ಜಿಲ್ಲೆಯ ಶೃಂಗೇರಿ ಶಾರದಾ ಮಠಕ್ಕೆ ಫೆಬ್ರವರಿ 20ರಂದು ರಾತ್ರಿ ಜೆ ಪಿ ನಡ್ಡಾ ಭೇಟಿ ನೀಡಲಿದ್ದಾರೆ. ಶೃಂಗೇರಿ ಶಾರದಾಂಬೆ ದರ್ಶನದ ನಂತರ ಶ್ರೀ ಜಗದ್ಗುರುಗಳನ್ನು ಜೆ ಪಿ ನಡ್ಡಾ ಅವರು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ. ಅಂದು ಕೊಪ್ಪ ಪಟ್ಟಣದಲ್ಲಿ ನಡೆಯಲಿರುವ ಅಡಕೆ ಬೆಳೆಗಾರರ ಸಮಾವೇಶದಲ್ಲಿ ಭಾಗವಹಿಸಿದ ಬಳಿಕ ಶೃಂಗೇರಿ ಮಠಕ್ಕೆ ಅವರು ಭೇಟಿ ನೀಡಲಿದ್ದಾರೆ.
ಅಂದು ರಾತ್ರಿ ಶೃಂಗೇರಿ ದೇವಾಲಯದ ವಿವಿಐಪಿ ಗೆಸ್ಟ್ ಹೌಸ್ ನಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ. ಮಾಜಿ ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಕೇಂದ್ರ ಸಚಿವ ಪಹ್ಲಾದ್ ಜೋಶಿ ಅವರ ಬಗ್ಗೆ ಹೇಳಿಕೆ ನೀಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಬೆನ್ನಲ್ಲೇ ಶಾರದಾ ಮಠಕ್ಕೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಭೇಟಿ ನೀಡಿ, ವಾಸ್ತವ್ಯ ಹೂಡುತ್ತಿದ್ದಾರೆ. ಜೆ ಪಿ ನಡ್ಡಾ ಶೃಂಗೇರಿ ಭೇಟಿ ವಿಚಾರ ಈಗ ಭಾರಿ ಕುತೂಹಲ ಮೂಡಿದೆ. ಇದೇ ವೇಳೆ ಶೃಂಗೇರಿ ಜಗದ್ಗುರು ಭೇಟಿಗೆ 20 ನಿಮಿಷಗಳ ಕಾಲಾವಕಾಶವನ್ನು ಜೆ ಪಿ ನಡ್ಡಾ ಕೇಳಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಕಾರ್ಯಕ್ರಮ: ಜಿಲ್ಲೆಯ ಪ್ರಸಿದ್ಧ ಶೃಂಗೇರಿ ಶಾರದಾ ಪೀಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತಿವೆ. ಶುಕ್ರವಾರದಿಂದ(ನಾಳೆಯಿಂದ) ಈ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ಸಿಕ್ಕಿದ್ದು ಫೆಬ್ರವರಿ 21ರ ವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶೃಂಗೇರಿ ಸಂಸ್ಥಾನದ ವತಿಯಿಂದ ಶ್ರೀಭವಾನಿ ಮಲಹಾನಿಕರೇಶ್ವರ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರ ಮಾಡಲಾಗಿದ್ದು, ಮಹಾ ಕುಂಭಾಭಿಷೇಕ ಸೇರಿದಂತೆ ಲಕ್ಷ ಮೋದಕ ಮಹಾಗಣಪತಿ ಹೋಮ, ಅತಿರುದ್ರಮಹಾಯಾಗ ಸಂಕಲ್ಪ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತಿವೆ.