ಚಿಕ್ಕಮಗಳೂರು:ದೇಶದ ಜನರೇ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಟಾರ್ಗೆಟ್ ಅವಶ್ಯಕತೆ ಇಲ್ಲ. ಅವರು ತಮ್ಮನ್ನು ತಾವು ವೈಭವೀಕರಿಸಿಕೊಳ್ಳಬಹುದು. ಅವರ ವೈಯಕ್ತಿಕ ಸಾಮರ್ಥ್ಯದ ಬಗ್ಗೆ ನಾನು ಪ್ರಶ್ನೆ ಮಾಡಲ್ಲ ಎಂದು ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಅವರ ರಾಜಕೀಯ ಸಾಮರ್ಥ್ಯ ಸಾಬೀತು ಮಾಡಿರೋದು ಕನಕಪುರದಲ್ಲಷ್ಟೆ. ಉಪ್ಪು ತಿಂದವರು ನೀರು ಕುಡೀತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಅವರು ಏನೂ ತಪ್ಪು ಮಾಡಿಲ್ಲ ಅಂದ್ರೆ ಆತಂಕ ಪಡುವ ಅವಶ್ಯಕತೆ ಇಲ್ಲ. ರಾಜಕೀಯದಲ್ಲಿ ಇದ್ದೇನೆಂದು ಆಶ್ರಯ ತೆಗೆದುಕೊಳ್ಳಲು ಆಗಲ್ಲ. ತಪ್ಪು ಮಾಡದೇ ಜೈಲಿಗೆ ಹೋದರೆ ಅದೊಂದು ಶಕ್ತಿ ಆಗುತ್ತೆ. ತಪ್ಪು ಮಾಡಿದವರದ್ದು ರಾಜಕೀಯ ಅಂತ್ಯ ಆಗುತ್ತೆ ಎಂದರು.
ಉತ್ತರಪ್ರದೇಶದಲ್ಲಿ ಮೈ ಲಡ್ಕಿ ಹೂಂ, ಲಡ್ ಸಕ್ತಾ ಹೂಂ ಅಂತ ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಚುನಾವಣೆ ನಡೆಯಿತು. 387 ಕ್ಷೇತ್ರದಲ್ಲಿ ಕಾಂಗ್ರೆಸ್ ಡೆಪಾಸಿಟ್ ಹೋಯ್ತು. ಕಾಂಗ್ರೆಸ್ ಅಧಿಕಾರದಲ್ಲಿದ್ದ ಪಂಜಾಬ್ನಲ್ಲಿ ಹೀನಾಯವಾಗಿ ಸೋತರು. ದೇಶದ ಜನರೇ ಕಾಂಗ್ರೆಸ್ ಅನ್ನು ತಿರಸ್ಕರಿಸಿರುವಾಗ ಅವರನ್ನು ಟಾರ್ಗೆಟ್ ಮಾಡಿ ಏನಾಗಬೇಕು ಎಂದು ಪ್ರಶ್ನಿಸಿದರು.