ಚಿಕ್ಕಮಗಳೂರು/ಮಂಗಳೂರು:ಬಿಜೆಪಿ - ಜೆಡಿಎಸ್ ಮೈತ್ರಿ ಸಂಬಂಧ ನಮ್ಮ ವರಿಷ್ಠರು ಅಳೆದು ತೂಗಿ ನಿರ್ಣಯ ತೆಗೆದುಕೊಂಡಿರುತ್ತಾರೆ ಅನ್ನೋದು ನಮ್ಮ ನಂಬಿಕೆ ಮತ್ತು ವಿಶ್ವಾಸ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು. ಲೋಕಸಭಾ ಚುನಾವಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ನಡೆಯುತ್ತಿರುವ ಚರ್ಚೆ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮೈತ್ರಿ ಕುರಿತು ವರಿಷ್ಠರು ಅಧಿಕೃತವಾಗಿ ಪ್ರಕಟಿಸಿದ ನಂತರ ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ದೇಶಕ್ಕೆ ಮೋದಿ ಮತ್ತೆ ಪ್ರಧಾನಿ ಆಗಬೇಕು, ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ರಾಜ್ಯದ ಜನರ ಅಪೇಕ್ಷೆಯಾಗಿದೆ. ಕಾಂಗ್ರೆಸ್ ತನ್ನ ಮೈತ್ರಿ ಕೂಟದ ಒಡಲಲ್ಲಿ ಸನಾತನ ಧರ್ಮದ ವಿಷ ಬೀಜಗಳನ್ನೆ ತುಂಬಿ ಕೊಂಡಿದೆ. ಅದಕ್ಕೆ ಉದಯನಿಧಿ ಸ್ಟಾಲಿನ್, ರಾಜ ಕೊಟ್ಟಿರೋ ಹೇಳಿಕೆಗಳಿಗೆ ಹಲವು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಈಗ ಡ್ಯಾಮೇಜ್ ಆಗುತ್ತಿದೆ ಎಂದು ದೂರ ಇರುವ ಪ್ರಯತ್ನ ಮಾಡುತ್ತಿದ್ದಾರೆ. ಅವರಿಗಿರೋದು ಸನಾತನ ಧರ್ಮದ ದ್ವೇಷ, ಭಾರತದ ಬಗ್ಗೆ ಅಸಹನೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮೈತ್ರಿ ವಿಚಾರವಾಗಿ ಮಾತುಕತೆ: ಮತ್ತೊಂದೆಡೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತುಕತೆ ಪ್ರಾರಂಭವಾಗಿದೆ. ಬಿಜೆಪಿ ಈಗ ರಾಜ್ಯದಲ್ಲಿ 25+1 ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಮುಂದಿನ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಲು ಪ್ರಯತ್ನಿಸುತ್ತೇವೆ. ಮೈತ್ರಿ ಬಗ್ಗೆ ಚರ್ಚೆ ಪ್ರಾರಂಭವಾಗಿದೆ, ಈ ಬಗ್ಗೆ ಮುಂದೆ ಎಲ್ಲರೂ ಕುಳಿತು ಚುನಾವಣೆ ತಂತ್ರಗಾರಿಕೆಯ ಬಗ್ಗೆ ಚರ್ಚಿಸಲಿದ್ದೇವೆ ಎಂದರು.