ಚಿಕ್ಕಮಗಳೂರು :ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಜಿಲ್ಲೆಯಲ್ಲಿ ಭರ್ಜರಿಯಾಗಿ ಪ್ರಚಾರ ನಡೆಸುತ್ತಿದ್ದಾರೆ.
ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಇವತ್ತು ಅನೇಕ ಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಮತಯಾಚನೆ ಮಾಡಿದರು. ದೇಶದ ರಕ್ಷಣೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿಯನ್ನು ಬೆಂಬಲಿಸಿ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೋದಿ ಅವರು ಕೈಯಲ್ಲಿ ಪೊರಕೆ ಹಿಡಿದ ತಕ್ಷಣ ಕಾಂಗ್ರೆಸ್ ಮತ್ತು ಜೆಡಿಎಸ್ನವರು ದೇಶ ಸ್ವಚ್ಛ ಆಗುತ್ತಾ ಎಂದು ಗೇಲಿ ಮಾಡಿದ್ದರು. ಉತ್ತರ ಕನ್ನಡದಲ್ಲಿ ಬಿಜೆಪಿ ವತಿಯಿಂದ ಅನೇಕ ಬಾರಿ ಪ್ರವಾಸ ಕೈಗೊಂಡಿದ್ದೇನೆ. ಅಲ್ಲಿ ಹೆಣ್ಣು ಮಕ್ಕಳು ಬಯಲು ಶೌಚಾಲಯ ಬಳಸುತ್ತಿದ್ದಾರೆ ಎಂಬ ವಿಷಯ ತಿಳಿದು ಮೋದಿ ಅವರಿಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೌಚಾಲಯ ನಿರ್ಮಾಣಕ್ಕಾಗಿ 15 ಸಾವಿರ ರೂ. ನೀಡಿ ಸುಮಾರು ಐದುವರೆ ಲಕ್ಷ ಹಳ್ಳಿಗಳನ್ನು ಬಯಲು ಮುಕ್ತ ಹಳ್ಳಿಗಳಾಗಿಸಿದ್ದಾರೆ. ಈ ಕೀರ್ತಿ ಮೋದಿಗೆ ಸಲ್ಲುತ್ತದೆ ಎಂದರು.
ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಬಿಜೆಪಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಜನರಿಂದ ಪೂರಕ ಸ್ವಂದನೆ ಸಿಗುತ್ತಿದೆ. ಹೆಚ್ಚು ಅಂತರದಿಂದ ಗೆಲುವನ್ನು ತಂದು ಕೊಡಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು. ತರೀಕೆರೆಯ ಬೇಲೇನಹಳ್ಳಿ, ರಂಗೇನಹಳ್ಳಿ, ಕರಕುಚ್ಚಿ, ಲಕ್ಕವಳ್ಳಿ, ಅಮೃತಾಪುರ, ಬೋಕಿಕೆರೆ ಸೇರಿದಂತೆ ಇನ್ನೂ ಹಲವಾರು ಹಳ್ಳಿಗಳಿಗೆ ಶೋಭಾ ಕರಂದ್ಲಾಜೆ ಅವರು ಭೇಟಿ ನೀಡಿ ಮತದಾರರಲ್ಲಿ ಮತಯಾಚನೆ ಮಾಡಿದರು.