ಸಿ.ಟಿ.ರವಿ ಬೆಂಬಲಿಗರ ಪಾದಯಾತ್ರೆ ಚಿಕ್ಕಮಗಳೂರು:ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೊಮ್ಮೆ ಗೆಲುವು ಸಾಧಿಸಿ ಮುಖ್ಯಮಂತ್ರಿ ಆಗಬೇಕು ಎಂದು ಚಿಕ್ಕಮಗಳೂರು ನಗರದಿಂದ 25 ಕಿ.ಮೀ. ದೂರದ ಕುಮಾರಗಿರಿಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದವರೆಗೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸೋಮವಾರ ಪಾದಯಾತ್ರೆ ನಡೆಸಿದ್ದಾರೆ.
ನಗರದ ಪ್ರವೇಶದ್ವಾರದಿಂದ ಆರಂಭವಾದ ಪಾದಯಾತ್ರೆ ಆಜಾದ್ ಪಾರ್ಕ್ ವೃತ್ತದ ಮಾರ್ಗವಾಗಿ ಸಾಗಿ ಕೋಟೆ, ಗವನಹಳ್ಳಿ, ಮೂಗ್ತಿಹಳ್ಳಿ, ರಾಮನಹಳ್ಳಿ, ಮಾರ್ಕೇಟ್ ರಸ್ತೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಸಾಗಿತು. ನಗಸಭೆ ಮಾಜಿ ಅಧ್ಯಕ್ಷ ಮುತ್ತಯ್ಯ, ಮಾಜಿ ಉಪಾಧ್ಯಕ್ಷ ಶ್ರೀನಿವಾಸ್ ಹಾಗೂ ನಗರಸಭೆ ಸದಸ್ಯ ಟಿ.ರಾಜಶೇಖರ್ ನೇತೃತ್ವದಲ್ಲಿ ಕುಮಾರಗಿರಿಗೆ ತೆರಳಿತು. ದಾರಿಯುದ್ಧಕ್ಕೂ ಸಿ.ಟಿ ರವಿ ಪರ ಘೋಷಣೆ ಕೂಗಿದರು.
ಕ್ಷೇತ್ರದಿಂದ ಸಿ.ಟಿ.ರವಿ ಸತತ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಬಾರಿಯೂ ಗೆಲ್ಲಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತಂದಿದ್ದಾರೆ. ಹಾಗಾಗಿ, ಅವರು ಸಿಎಂ ಆಗಬೇಕು ಎಂಬುದು ಜನರ ಆಶಯ ಎಂದು ಅಭಿಮಾನಿಗಳು ತಿಳಿಸಿದರು. ತಮಿಳುನಾಡಿನಲ್ಲಿ ಸಿ.ಟಿ.ರವಿ ಅವರಿಗೆ ಉಡುಗೊರೆಯಾಗಿ ನೀಡಿದ್ದ ಸುಬ್ರಹ್ಮಣ್ಯ ಸ್ವಾಮಿಯ ಆಯುಧ ಬೆಳ್ಳಿ ಬಾಣವನ್ನು ಕುಮಾರಗಿರಿಯ ಸುಬ್ರಹ್ಮಣ್ಯ ಸ್ವಾಮಿಗೆ ಇದೇ ವೇಳೆ ಒಪ್ಪಿಸಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸಿ.ಟಿ.ರವಿ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಆದರೆ, ಮಾನ ಇದ್ದವರು ಮಾತ್ರ ಮಾನನಷ್ಟ ಮೊಕದ್ದಮೆ ಹೂಡುತ್ತಾರೆ. ಈ ಬಗ್ಗೆ ಯೋಚನೆ ಮಾಡಿದರೆ ಅದು ಅವರಿಗೇ ತಿರುಗುಬಾಣ ಆಗಲಿದೆ. ಡಿಕೆಶಿ ಮುಖ್ಯಮಂತ್ರಿ ಆಗಬೇಕೆಂದು ಹೊರಟಿದ್ದು, ಅದು ಸಾಧ್ಯವೇ ಇಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದೇ ಇಲ್ಲ ಎಂದು ಸಿ.ಟಿ.ರವಿ ಅಭಿಮಾನಿಗಳು ಹೇಳಿದರು.
ಇದನ್ನೂ ಓದಿ:ಸಿ ಟಿ ರವಿಗೆ ಸೋಲಿನ ಭೀತಿಯಿಂದ ಮತಿಭ್ರಮಣೆಯಾಗಿದೆ: ಡಿಕೆಶಿ