ಚಿಕ್ಕಮಗಳೂರು:ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟಿದ್ದ ಜಿಲ್ಲೆಯ ಕಡೂರು ತಾಲೂಕಿನ ಬಿಳುವಾಲ ಗ್ರಾಮದ ಬಿಎಸ್ಎಫ್ ಯೋಧ ಬಿ.ಕೆ.ಶೇಷಪ್ಪ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ಇಂದು ತರಲಾಗಿದೆ.
ಜಮ್ಮುವಿನಲ್ಲಿ ಬಿಎಸ್ಎಫ್ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶೇಷಪ್ಪ ಅವರು ಕರ್ತವ್ಯ ನಿರ್ವಹಣೆ ವೇಳೆ ಗಂಭೀರವಾಗಿ ಗಾಯಗೊಂಡಿದ್ದರು. ಜಮ್ಮುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೂರು ದಿನಗಳ ಹಿಂದೆ ಮೃತಪಟ್ಟಿದ್ದರು.
ಪಾರ್ಥಿವ ಶರೀರ ಜಮ್ಮುವಿನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಅಲ್ಲಿಂದ ಯಲಹಂಕದ BSF ಕಚೇರಿಗೆ ತರಲಾಯಿತು. ಮಿಲಿಟರಿ ನಿಯಮ ಪಾಲನೆ ಬಳಿಕ ಅಲ್ಲಿಂದ ಕಡೂರು ಮೂಲಕವಾಗಿ ಬಿಳುವಾಲ ಗ್ರಾಮಕ್ಕೆ ಪಾರ್ಥಿವ ಶರೀರ ತರಲಾಯಿತು. ಈ ವೇಳೆ ಕಡೂರು ಪಟ್ಟಣದಲ್ಲಿ ಯೋಧನ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಮೃತ ಯೋಧನ ಕುಟುಂಬಸ್ಥರು ಸೇರಿದಂತೆ ಸಾವಿರಾರು ಜನರು ಭಾಗಿಯಾಗಿದ್ದರು.
ಸೈನಿಕ ಗೌರವಗಳೊಂದಿಗೆ ಕಡೂರಿನ ಬಿಳುವಾಲ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.