ಚಿಕ್ಕಮಗಳೂರು : 100 ರೂಪಾಯಿ ಆಟೋ ಬಾಡಿಗೆಗೆ ಬಂದಿದ್ದ ಆಟೋ ಚಾಲಕ ತನ್ನ ಆಟೋವನ್ನ ರಕ್ಷಿಸಿಕೊಳ್ಳಲು 6000 ರೂಪಾಯಿ ದಂಡವಾಗಿ ತೆತ್ತ ಘಟನೆ ನಗರದಲ್ಲಿ ನಡೆದಿದೆ. ಜಿಲ್ಲಾಡಳಿತ, ಮುಕ್ತ ವಿಶ್ವವಿದ್ಯಾನಿಲಯಕ್ಕೆ ಬೇಡಿಕೊಂಡರು ಯಾರೂ ಸಹಾಯ ಮಾಡದ ಹಿನ್ನೆಲೆ ಕೊನೆಗೆ ತನ್ನ ಆಟೋವನ್ನ ರಕ್ಷಿಸಲು ತಾನೇ ₹ 6000 ಸಾವಿರ ಸಾಲ ಮಾಡಿ ರಕ್ಷಿಸಿಕೊಂಡಿದ್ದಾರೆ.
ನಗರದಲ್ಲಿ ಮೊನ್ನೆ ರಾತ್ರಿ ಭಾರೀ ಮಳೆ ಸುರಿದಿತ್ತು. ಭಾರೀ ಮಳೆಯಿಂದ ನಗರದ ಮಧುವನ ಲೇಔಟ್‍ನಲ್ಲಿರುವ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆಯೂ ಕುಸಿದಿತ್ತು. ಇದರಿಂದ ಪರೀಕ್ಷೆ ಬರೆಯಲು ಬಂದಿದ್ದ ಸುಮಾರು 40 ವಿದ್ಯಾರ್ಥಿಗಳು ಹೊರ ಬರಲು ಜಾಗವಿಲ್ಲದೇ ಅಲ್ಲೇ ಉಳಿದಿದ್ದರು.
ವಿಷಯ ತಿಳಿದ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸಿಬ್ಬಂದಿ ವಿದ್ಯಾರ್ಥಿಗಳನ್ನ ರಕ್ಷಣೆ ಮಾಡಿತ್ತು. ಆದರೆ, ವಿದ್ಯಾರ್ಥಿಗಳನ್ನ ಕರೆ ತಂದಿದ್ದ ಆಟೋ ಚಾಲಕ ಕಚೇರಿ ಬಳಿಯೇ ಲಾಕ್ ಆಗಿದ್ದ. ಸೇತುವೆ ದೊಡ್ಡ ಪ್ರಮಾಣದಲ್ಲಿ ಕುಸಿದ ಕಾರಣ ಆಟೋ ಹೊರ ಬರಲು ಜಾಗವೇ ಇರಲಿಲ್ಲ. ಈ ವೇಳೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಆಟೋ ಚಾಲಕನಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಆದರೆ, ಯಾರೂ ಸಹಾಯ ಮಾಡಲಿಲ್ಲವಂತೆ.