ಚಿಕ್ಕಮಗಳೂರು: ಚಿಕ್ಕಮಗಳೂರು ಎಂದರೆ ನೆನಪಿಗೆ ಬರುವುದು ಪ್ರಕೃತಿ ಸೌಂದರ್ಯದಿಂದ ಕೂಡಿರುವ ನಿಸರ್ಗ ದೇವತೆ. ಹಸಿರುಟ್ಟ ಬೆಟ್ಟಗಳ ಸಾಲು. ಹಸಿರ ತಬ್ಬಿ ಮೋಡಕ್ಕೆ ಮುತ್ತಿಕ್ಕುವ ಮಂಜಿನ ಕಣ್ಣಾ ಮುಚ್ಚಾಲೆಯಾಟ ಆಡುತ್ತಿವೆ ಎಂಬಂತೆ ಕಂಡು ಬರುವ ಬೆಟ್ಟಗಳು. ಕಿರಿದಾದ ಕಣಿವೆಗಳು. ಹೇಳಲು ಪದಗಳು, ಬರೆಯಲು ಪುಟಗಳು ಸಾಲದು ಈ ಮಲೆನಾಡ ವನವೈಭವ ಕುರಿತು.
ಜಿಲ್ಲೆಯಲ್ಲಿ ಕೆಮ್ಮಣ್ಣುಗುಂಡಿ, ಬಾಬಾ ಬುಡನ್ ಗಿರಿ, ಮುಳ್ಳಯ್ಯನಗಿರಿ...ಹೀಗೆ ಹಲವು ತಾಣಗಳು ಪ್ರವಾಸಿಗರ ನೆಚ್ಚಿನ ಪ್ರದೇಶಗಳೆಂದರೆ ತಪ್ಪಾಗಲಾರದು. ಆದರೆ, ಅವುಗಳಲ್ಲಿ ಮುಳ್ಳಯ್ಯನಗಿರಿ ಬೆಟ್ಟ ವಿಶೇಷವಾದದ್ದು. ವಿಭಿನ್ನವಾದದ್ದು. ಮಳೆಗಾಲಕ್ಕೂ ಮುನ್ನವೇ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಮುಳ್ಳಯ್ಯನಗಿರಿ ನೈಜ ಸೊಬಗು ಸವಿಯಲು ಈ ಬಾರಿ ಪ್ರವಾಸಿಗರಿಗೇ ಅದೃಷ್ಟವೇ ಇಲ್ಲದಂತಾಗಿದೆ. ಈಗೊಮ್ಮೆ ಮುಳ್ಳಯ್ಯನಗಿರಿಗೆ ಭೇಟಿ ಕೊಟ್ಟರೆ, ನಿಜಕ್ಕೂ ನಾವು ಸ್ವರ್ಗದಲ್ಲಿದ್ದೇವೆ ಎಂದು ಭಾಸವಾಗುತ್ತದೆ.
ಜಿಲ್ಲಾದ್ಯಂತ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆ, ಮಲೆನಾಡ ಸೊಬಗನ್ನು ಇಮ್ಮಡಿಗೊಳಿಸಿದೆ. ಮುಳ್ಳಯ್ಯನಗಿರಿ ಸೌಂದರ್ಯ ಮೂರ್ನಾಲ್ಕು ದಶಕಗಳಷ್ಟು ಹಿಂದೆ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಬದಾಗಿದೆ. ಹಚ್ಚ ಹಸಿರಿನ ಸ್ವಚ್ಛ ಪ್ರಕೃತಿಯ ಸೌಂದರ್ಯ ಪ್ರಕೃತಿಯನ್ನೇ ನಾಚಿಸುವಂತಿದೆ. ನಗರದಿಂದ 40 ಕಿಮೀ ದೂರದಲ್ಲಿರುವ ಈ ಗಿರಿಯ ವನರಾಶಿಯ ಸೊಬಗನ್ನು ಈ ವರ್ಷ ಸವಿಯುವ ಪ್ರವಾಸಿಗರ ಅದೃಷ್ಟವನ್ನು ಕೊರೊನಾ ಕಿತ್ತುಕೊಂಡಿದೆ.
ಮುಳ್ಳಯ್ಯನಗಿರಿ ವನವೈಭವ ಕುರಿತು ಸ್ಥಳೀಯರ ಅಭಿಪ್ರಾಯ ಮಲೆನಾಡ ನಿಸರ್ಗ ಚೆಲುವಿನ ಸೌಂದರ್ಯ ಮುಂಗಾರು ಪೂರ್ವದಲ್ಲೇ ಈ ಬಾರಿ ಅನಾರವಣಗೊಂಡಿದೆ. ಪ್ರವಾಸಿಗರಿಲ್ಲದೆ ಪಕ್ಷಿಗಳ ಕೂಗಾಟ-ಚೀರಾಟ ಹೆಚ್ಚಾಗಿದೆ. ಗಿರಿಗೆ ಸಾಗುವ ರಸ್ತೆಯುದ್ದಕ್ಕೂ ಕಣ್ಣು ಹಾಯಿಸಿದಲೆಲ್ಲಾ ಕಣ್ಣಿಗೆ ಹಸಿರಸಿರಿ ಅಪ್ಪಳಿಸುತ್ತಿದೆ. ಮುಗಿಲೆತ್ತರದ ಗಿರಿಶಿಖರಗಳಿಂದ ಧುಮ್ಮಿಕ್ಕಿ ಬರುವ ಮಂಜಿಗೆ ಮೈಯೊಡ್ಡಿ ಜಗತ್ತನ್ನೇ ಮರೆಯಲು ಪ್ರವಾಸಿಗರಿಲ್ಲ. ಈ ವನ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಸಹ ಎದುರು ನೋಡುತ್ತಿದ್ದಾರೆ. ಆದರೆ, ಸರ್ಕಾರ ಅನುಮತಿ ನೀಡುವವರೆಗೂ ಕಾಯಬೇಕಾಗಿದೆ.