ಚಿಕ್ಕಮಗಳೂರು:ಹುಲಿ ಉಗುರು ಧರಿಸಿದ್ದ ಆರೋಪದಡಿ ಮೂಡಿಗೆರೆ ತಾಲೂಕಿನ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ತಾಲೂಕಿನ ಬಿ.ಹೊಸಳ್ಳಿಯ ಕುಂಡ್ರ ನಿವಾಸಿ ಸತೀಶ್ ಮತ್ತು ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ಬಂಧಿತರು. ಹುಲಿ ಉಗುರು ಧರಿಸಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂಡಿಗೆರೆ ಕಡೆಯಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ ಸತೀಶ್‌ನನ್ನು ಚಿಕ್ಕಮಗಳೂರು ಸಮೀಪದ ಮತ್ತಾವರ ಅರಣ್ಯ ಮಾಹಿತಿ ಕೇಂದ್ರದ ಬಳಿ ತಡೆದು ಬಂಧಿಸಿದ್ದಾರೆ.
ಸತೀಶ್ ಕುತ್ತಿಗೆಗೆ ಧರಿಸಿದ್ದ ಬೆಳ್ಳಿ ಸರದಲ್ಲಿ ಹುಲಿ ಉಗುರು ಇರುವುದು ಪತ್ತೆಯಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿ ಉಗುರನ್ನು ತನಗೆ ಮೂಡಿಗೆರೆ ತಾಲೂಕಿನ ಹುಲ್ಲೇ ಮನೆ ಕುಂದೂರು ನಿವಾಸಿ ರಂಜಿತ್ ನೀಡಿದ್ದು ಎಂದು ಮಾಹಿತಿ ನೀಡಿದ್ದಾನೆ. ನಂತರ ರಂಜಿತ್‌ನನ್ನು ಹುಲ್ಲೇ ಮನೆಯ ನಿವಾಸದಲ್ಲಿ ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿ ಆತ ಕೊಪ್ಪದ ಆದರ್ಶ ಮತ್ತು ಆಲ್ದೂರು ಸಮೀಪದ ಕೋಣನ ಬಸರಿ ಮಣಿ ಎಂಬವರ ಹೆಸರು ಹೇಳಿದ್ದಾನೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ವಿಷಯ ತಿಳಿದು ಆದರ್ಶ ಮತ್ತು ಮಣಿ ತಲೆ ಮರೆಸಿಕೊಂಡಿದ್ದು, ಅವರುಗಳ ಬಂಧನಕ್ಕೆ ಅರಣ್ಯ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಂಧಿತ ಇಬ್ಬರು ಆರೊಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹುಲಿ ಉಗುರು ಪ್ರಕರಣದಲ್ಲಿ ದೊಡ್ಡ ಜಾಲವೇ ಇರುವುದು ಕಂಡು ಬರುತ್ತಿದ್ದು, ಇವರುಗಳಿಗೆ ಹುಲಿ ಉಗುರು ಎಲ್ಲಿಂದ ಸಿಕ್ಕಿತು?, ಇದರ ಹಿಂದೆ ಯಾರೆಲ್ಲಾ ಇದ್ದಾರೆ? ಎಂಬುದರ ಬಗ್ಗೆ ಅರಣ್ಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.