ಚಿಕ್ಕಮಗಳೂರು:ತಾಲೂಕಿನ ದತ್ತಾತ್ರೇಯ ಬಾಬಾ ಬುಡನ್ ದರ್ಗಾಕ್ಕೆ ಬಿಜೆಪಿ ಸರ್ಕಾರದ ನೇಮಿಸಿದ್ದ ಆಡಳಿತ ವ್ಯವಸ್ಥಾಪನ ಸಮಿತಿಯನ್ನ ವಜಾ ಮಾಡಬೇಕೆಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರ ಟ್ರಸ್ಟ್ ಅಧ್ಯಕ್ಷ ಸಯೈದ್ ಹುಸೇನ್ ಶಾ ಖಾದ್ರಿ ಅವರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಹಿಂದಿನ ಬಿಜೆಪಿ ಸರ್ಕಾರ ಹಲವು ವಿರೋಧದ ಮಧ್ಯೆಯೂ ದತ್ತಪೀಠಕ್ಕೆ ವ್ಯವಸ್ಥಾಪನ ಸಮಿತಿಯನ್ನ ರಚನೆ ಮಾಡಿತ್ತು. ಎರಡು ಸಮುದಾಯದ ಇಬ್ಬರು ಮಹಿಳೆಯರು ಸೇರಿ ಸಮಿತಿ ರಚನೆಯಾಗಬೇಕಿತ್ತು. ಆದರೆ, ಒಂದೇ ಸಮುದಾಯದ ಏಳು ಜನ ಹಾಗೂ ಬಿಜೆಪಿ ಕಾರ್ಯಕರ್ತ ಬಾಷಾ ಎಂಬುವರನ್ನ ಸೇರಿಸಿಕೊಂಡು ಒಟ್ಟು ಎಂಟು ಜನರ ಸಮಿತಿಯನ್ನು ಹಿಂದಿನ ಸರ್ಕಾರ ರಚಿಸಿತ್ತು. ಯಾವುದೇ ಮಾನದಂಡದಿಂದ ನೋಡಿದರೂ ಈ ಸಮಿತಿ ಕ್ರಮಬದ್ಧವಾಗಿಲ್ಲ. ದತ್ತ ಜಯಂತಿ ವೇಳೆ ಹೊರಗಡೆ ಪೂಜೆ ಮಾಡಲು ಎರಡು ದಿನದ ಮಟ್ಟಿಗೆ ಅರ್ಚಕರ ನೇಮಕಾತಿಗೆ ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು. ಆದರೆ, ನ್ಯಾಯಾಲಯದ ಯಾವುದೇ ಅನುಮತಿ ಇಲ್ಲದಿದ್ದರೂ ಇಂದಿಗೂ ಅರ್ಚಕರಿಂದ ಪೂಜೆ ಮುಂದುವರೆಸಿದ್ದಾರೆ. ಇದು ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದೆ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಉರುಸ್ ಸಂದರ್ಭದಲ್ಲಿ ಯಾವುದೇ ಯಾವುದೇ ಆಚರಣೆ ಮಾಡಿರುವುದಿಲ್ಲ. ಸಜ್ಜಾದ ನಶೀನ್ ಮತ್ತು ಶಾಖಾದ್ರಿಗಳಿಗೆ ವಿಧಿ-ವಿಧಾನಗಳಂತೆ ನಡೆದುಕೊಳ್ಳಲ್ಲು ಅವಕಾಶ ನೀಡಿರುವುದಿಲ್ಲ. ಈ ಸಮಿತಿ ಒಂದು ಸಮುದಾಯದ ಪರವಾಗಿ ಇರುತ್ತದೆ. ಆದ್ದರಿಂದ ಕೊಡಲೇ ಸಮಿತಿಯನ್ನು ವಜಾಗೊಳಿಸಿ ಕ್ರಮಬದ್ಧವಾದ, ಪಾರದರ್ಶಕವಾದ ಸಮಿತಿಯನ್ನು ರಚನೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಜೊತೆಗೆ, ತಕ್ಷಣ ಈ ಸಮಿತಿಯನ್ನು ವಜಾಗೊಳಿಸಿ ಎರಡು ಸಮುದಾಯದ ಸಮಾನ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚನೆ ಮಾಡಬೇಕು. ಅಥವಾ ದಶಕಗಳ ಹಿಂದಿನಂತೆ ಸಜ್ಜಾದ ನಶೀನ್ ನಾಯಕತ್ವದಲ್ಲಿ ಶಾಖಾದ್ರಿಗಳ ಸಮಿತಿ ರಚಿಸಬೇಕು. ಉರುಸ್ಅನ್ನು ಸರಿಯಾಗಿ ಆಚರಿಸದ ಅಧಿಕಾರಿಗಳು ಹಾಗೂ ವ್ಯವಸ್ಥಾಪನ ಸಮಿತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸಂಪ್ರದಾಯದಂತೆ ದರ್ಗಾದಲ್ಲಿ ಎಲ್ಲ ಆಚರಣೆಗಳನ್ನು ಅನುಸರಿಸಬೇಕು. ಎಲ್ಲಾ ರಸ್ತೆಗಳಲ್ಲಿ ಬಾಬಾ ಬುಡನ್ ದರ್ಗಾ ನಾಮಫಲಕವನ್ನು ಹಾಕಬೇಕು. ದೂರದಿಂದ ಬರುವ ಭಕ್ತರಿಗೆ ಹಿಂದಿನಂತೆ ಗಂಜಿ ಖಾನೆ ಮತ್ತು ವಸತಿಯನ್ನು ನಿರ್ಮಿಸಬೇಕು ಎಂದು ಹಕ್ಕೊತ್ತಾಯ ಮಾಡುತ್ತೇವೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರ ಟ್ರಸ್ಟ್ ಅಧ್ಯಕ್ಷ ಸಯೈದ್ ಹುಸೇನ್ ಶಾ ಖಾದ್ರಿ ತಿಳಿಸಿದ್ದಾರೆ.
ಇದನ್ನೂ ಓದಿ:ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸುವಂತೆ ಪ್ರಧಾನಿ ಮೋದಿಗೆ ಪತ್ರ: ಪಿಎಂ ಕಚೇರಿಯಿಂದ ಮರುಪತ್ರ