ಕರ್ನಾಟಕ

karnataka

ETV Bharat / state

ಅನ್ವರ್ ಹತ್ಯೆ ಪ್ರಕರಣ: ಹಂತಕರನ್ನು ಬಂಧಿಸಿ, ಇಲ್ಲವೇ ದಯಾಮರಣ ಕೊಡಿ ಎಂದ ಕುಟುಂಬಸ್ಥರು - ಅನ್ವರ್ ಸಹೋದರ ಅಬ್ದುಲ್ ಕಬೀರ್

ಜೂನ್ 22 - 2018 ರಂದು ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ಮುಖಂಡ ಅನ್ವರ್ ಹತ್ಯೆ ಪ್ರಕರಣದ ತನಿಖೆ ವಿಳಂಬವಾಗುತ್ತಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಮೃತನ ಕುಟುಂಬಸ್ಥರು ಮನವಿ ಮಾಡಿದ್ದಾರೆ.

anwar murder case
ಅನ್ವರ್ ಹತ್ಯೆ ಪ್ರಕರಣ

By

Published : Jun 24, 2023, 7:54 AM IST

ಅನ್ವರ್ ಸಹೋದರ ಅಬ್ದುಲ್ ಕಬೀರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ನಮ್ಮ ಸಹೋದರನ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸಿ ನ್ಯಾಯ ಕೊಡಿಸಿ, ಇಲ್ಲವೇ ನಮ್ಮ ಕುಟುಂಬಕ್ಕೆ ದಯಾಮರಣ ನೀಡಿ ಎಂದು ಅನ್ವರ್ ಸಹೋದರ ಅಬ್ದುಲ್ ಕಬೀರ್ ಚಿಕ್ಕಮಗಳೂರು ನಗರದಲ್ಲಿ ಒತ್ತಾಯಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಮ್ಮ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಸೇರಿದಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರಿಂದ ಅಂದಿನ ಬಿಜೆಪಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು. ಸದ್ಯ ಸಿಐಡಿಯವರು ತನಿಖೆ ನಡೆಸುತ್ತಿದ್ದರೂ ಆರೋಪಿಗಳ ಸುಳಿವು ಮಾತ್ರ ಸಿಕ್ಕಿಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.

ಏನಿದು ಪ್ರಕರಣ?: ಜೂನ್ 22 - 2018 ರಂದು ಚಿಕ್ಕಮಗಳೂರಿನ ಬಿಜೆಪಿ ಮುಖಂಡ ಅನ್ವರ್ ಗೌರಿ ಕಾಲುವೆಯ ಗುಡ್ಮಾರ್ನಿಂಗ್ ಶಾಪ್ ಬಳಿ ಕೊಲೆಯಾಗಿದ್ದರು. ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಕೂಡ ಆಗಿದ್ದ ಅನ್ವರ್​ನನ್ನು ದುಷ್ಕರ್ಮಿಗಳು ಡ್ರ್ಯಾಗರ್ ನಿಂದ ದೇಹದ ಆರು ಕಡೆ ಚುಚ್ಚಿ ಕೊಲೆ ಮಾಡಿದ್ದರು. ಮರುದಿನ ಚಿಕ್ಕಮಗಳೂರಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದಿನ ಎಸ್​ಪಿ ಅಣ್ಣಾಮಲೈ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು, ಆದರೆ ಆರೋಪಿಗಳನ್ನ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಆರೋಪಿಗಳನ್ನು ಬಂಧಿಸುವಂತೆ ಚಿಕ್ಕಮಗಳೂರು ನಗರದ ಗಾಂಧಿ ಪ್ರತಿಮೆ ಎದುರು ಕುಟುಂಬಸ್ಥರು ಉಪವಾಸ ಸಹ ಕೂತಿದ್ದರು.

2019 ರಲ್ಲಿ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿಗೆ ವಹಿಸುವಂತೆ ಪಟ್ಟು ಹಿಡಿದಾಗ ಅನ್ವರ್ ಕೊಲೆ ಪ್ರಕರಣ ಸಿಐಡಿಗೆ ಹಸ್ತಾಂತರವಾಯ್ತು. ಇಷ್ಟಾದರೂ ಪ್ರಕರಣದಲ್ಲಿ ಯಾವುದೇ ಮಹತ್ವದ ಬೆಳವಣಿಗೆಗಳು ನಡೆದಿಲ್ಲ, ಇದರಿಂದ ಕುಟುಂಬಸ್ಥರರು ಇದೀಗ ನೂತನ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.

ಕಾಫಿನಾಡನ್ನು ಬೆಚ್ಚಿ ಬೀಳಿಸಿದ ಕೊಲೆಗೆ ಬರೋಬ್ಬರಿ 5 ವರ್ಷ 1 ತಿಂಗಳಾಯ್ತು. ಪ್ರಕರಣ ಭೇದಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ತಾಳ್ಮೆ ಕಳೆದು ಕೊಂಡಿರುವ ಕುಟುಂಬಸ್ಥರು ದಯಾಮರಣಕ್ಕೂ ಸಿದ್ಧರಾಗಿದ್ದಾರೆ. ಪ್ರಕರಣದ ತನಿಖಾಧಿಕಾರಿಗಳನ್ನು ಪದೇ ಪದೆ ವರ್ಗಾವಣೆ ಮಾಡುತ್ತಿರುವುದರಿಂದ ತನಿಖೆ ವಿಳಂಬವಾಗುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತು. ಈ ವೇಳೆ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಅವರಿಂದಾಗಿ ಪ್ರಕರಣದ ತನಿಖೆಯನ್ನು ಸರ್ಕಾರ ಸಿಐಡಿಗೆ ಒಪ್ಪಿಸಿದೆ. ಆದರೂ, ತನಿಖೆ ಸಮರ್ಪಕವಾಗಿ ನಡೆಯದಿರುವುದರ ಬಗ್ಗೆ ಬೇಸರವಿದೆ ಎಂದು ಅಬ್ದುಲ್ ಹೇಳಿದರು.

"ಈ ಹಿಂದೆ ತನಿಖಾಧಿಕಾರಿಗಳು, ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ, ತನಿಖೆ ಶೇ.90 ರಷ್ಟು ಪೂರ್ಣಗೊಂಡಿದೆ ಎಂದು ಹೇಳುತ್ತಿದ್ದರು. ಆದರೆ, 5 ವರ್ಷ ಕಳೆದರೂ ತನಿಖೆ ಪೂರ್ಣ ಗೊಳ್ಳದಿರುವುದರ ಬಗ್ಗೆ ರಾಜಕೀಯ ಒತ್ತಡ ಇರುವ ಶಂಕೆ ಕಾಣುತ್ತಿದೆ. ತನಿಖಾಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲೇ ಅವರನ್ನು ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ, ಪೊಲೀಸ್ ಇಲಾಖೆ ಕೂಡಲೇ ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವ ಮೂಲಕ ನಮಗೆ ನ್ಯಾಯ ನೀಡಬೇಕು. ಇಲ್ಲವೇ ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳು ನಮ್ಮ ಇಡೀ ಕುಟುಂಬಕ್ಕೆ ದಯಾಮರಣಕ್ಕೆ ಅನುಮತಿ ನೀಡಬೇಕು" ಎಂದು ಅನ್ವರ್ ಕುಟುಂಬ ಮನವಿ ಮಾಡಿದೆ.

ಇದನ್ನೂ ಓದಿ :ಬಿಜೆಪಿ ಮುಖಂಡನ ಮನೆ ಮೇಲೆ ಉಗ್ರರ ದಾಳಿ: ಓರ್ವ ಭದ್ರತಾ ಸಿಬ್ಬಂದಿ ಹುತಾತ್ಮ

ABOUT THE AUTHOR

...view details