ಚಿಕ್ಕಮಗಳೂರು:ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ದತ್ತಪೀಠದ ವಿವಾದಿತ ಇನಾಂ ದತ್ತಾತ್ರೆಯ ಪೀಠದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ದತ್ತ ಜಯಂತಿಗೆ ಇಂದು ಸಂಭ್ರಮದ ಚಾಲನೆ ದೊರೆಯಿತು.
ಮೊದಲನೇ ದಿನ ಅನುಸೂಯಾ ಜಯಂತಿಯ ಪ್ರಯುಕ್ತ ಚಿಕ್ಕಮಗಳೂರು ನಗರದಲ್ಲಿ ಸಂಕೀರ್ತನಾ ಯಾತ್ರೆ ಕೈಗೊಂಡ ಎಂಟು ಸಾವಿರಕ್ಕೂ ಅಧಿಕ ಮಹಿಳೆಯರು, ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ದತ್ತಪೀಠಕ್ಕೆ ತೆರಳಿ ಪೊಲೀಸ್ ಭದ್ರತೆಯಲ್ಲೇ ದತ್ತಪಾದುಕೆಯ ದರ್ಶನ ಪಡೆದರು. ಬಳಿಕ ಅನುಸೂಯಾ ದೇವಿಗೆ ಪೂಜೆ, ಹೋಮ, ಹವನ ನಡೆಸಿದರು. ಮೆರವಣಿಗೆಯಲ್ಲಿ ಶಾಸಕ ಸಿ ಟಿ ರವಿ ಭಾಗಿಯಾಗಿದ್ದರು.
ದತ್ತಪೀಠಕ್ಕೆ ತೆರಳುವ ಮಾರ್ಗದಲ್ಲಿ ಕಿಡಿಗೇಡಿಗಳು ಮೊಳೆ ಸುರಿದಿದ್ದು, ಪೊಲೀಸ್ ವಾಹನ ಸೇರಿ ನಾಲ್ಕೈದು ವಾಹನಗಳು ಪಂಚರ್ ಆಗಿವೆ. ಈ ರೀತಿಯ ಗೊಡ್ಡು ಬೆದರಿಕೆಗೆ ನಾವು ಬಗ್ಗಲ್ಲ. ದತ್ತ ಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಮಾಡುತ್ತೇವೆ ಸಿ ಟಿ ರವಿ ಹೇಳಿದರು.