ಚಿಕ್ಕಮಗಳೂರು :ಕಾಫಿನಾಡಿನ ಆದಿಶಕ್ತ್ಯಾತ್ಮಕ ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿಂದು ಬ್ರಹ್ಮರಥೋತ್ಸವದ ಸಂಭ್ರಮ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥೋತ್ಸವ ನಡೆಸಿ ಅನ್ನಪೂರ್ಣೇಶ್ವರಿಯ ಕೃಪೆಗೆ ಪಾತ್ರರಾದರು.
ಕ್ಷೇತ್ರದಲ್ಲಿ ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ಒಟ್ಟು ಐದು ದಿನಗಳ ಕಾಲ ಬ್ರಹ್ಮರಥೋತ್ಸವ ನಡೆಯುತ್ತದೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ ಛತ್ರಿ ಚಾಮರಗಳ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನ ತಂದು ರಥದಲ್ಲಿ ಕೂರಿಸಲಾಯ್ತು. ನೆರೆದಿದ್ದ ಭಕ್ತರು ರಥಕ್ಕೆ ಕಾಯಿಯನ್ನ ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು.
ಅದ್ದೂರಿಯಾಗಿ ಜರುಗಿದ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಜಾತ್ರೆ ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಮೆಣಸು, ಕಾಫಿ, ಅಡಿಕೆ ಬೆಳೆಗಳನ್ನು ಸಮರ್ಪಿಸಿ ಹರಕೆಗಳನ್ನ ಸಲ್ಲಿಸಿದರು. ವರ್ಷಪೂರ್ತಿ ಗರ್ಭಗುಡಿಯಲ್ಲೇ ಕೂತು ಭಕ್ತರಿಗೆ ದರ್ಶನ ನೀಡುವ ತಾಯಿ ಈ ವಿಶೇಷ ದಿನದಂದು ಅಷ್ಟೇ ರಥದಲ್ಲಿ ಕೂತು ಭಕ್ತರಿಂದಲೇ ತನ್ನ ರಥ ಎಳೆಸಿಕೊಂಡು ಸಂತಸ ಪಟ್ಟು ದರ್ಶನ ನೀಡ್ತಾಳೆ ಅನ್ನೋ ನಂಬಿಕೆ ಭಕ್ತರದ್ದಾಗಿದೆ.
ಅನ್ನಪೂರ್ಣೇಯ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯೋ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಹಗಲಿನಲ್ಲಷ್ಟೇ ಅಲ್ಲದೆ ರಾತ್ರಿ ವೇಳೆಯೂ ವಿಶೇಷ ರಥೋತ್ಸವ ನಡೆಯುತ್ತಿದೆ. ನಾಳೆ ಬೆಳಗ್ಗೆ ಶಯನೋತ್ಸವ ಹಾಗೂ ಸಂಜೆ ಓಕುಳಿ ಸಂಪ್ರೋಕ್ಷಣೆಯೊಂದಿಗೆ ಪಂಚಮ ದಿನಗಳ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಕೊರೊನಾ 2ನೇ ಅಲೆಯ ಆತಂಕದ ನಡುವೆಯೂ ಸಾವಿರಾರು ಭಕ್ತರು ಶ್ರೀಕ್ಷೇತ್ರ ಹೊರನಾಡಿಗೆ ಆಗಮಿಸಿ ದೇವಿಯ ದರ್ಶನ ಪಡೆದಿರೋದು ವಿಶೇಷ.