ಅನುದಾನ ಬಿಡುಗಡೆ ವಿಳಂಬ: ನಲಗುತ್ತಿರುವ ಅಂಗನವಾಡಿ ಮಕ್ಕಳು, ಸಿಬ್ಬಂದಿ - Chikkamagalur district news
ದೇಶದಲ್ಲಿ ಅಂಗನವಾಡಿ ಕೇಂದ್ರಗಳನ್ನು 1974ರಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ನಂತರ ದಿನಗಳಲ್ಲಿ ಇದನ್ನೇ ಖಾಯಂ ಮಾಡಲಾಯಿತು. ಅಂದು ಬೆಳಗ್ಗೆ 9.30 ರಿಂದ 1 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಅಂಗನವಾಡಿಗಳ ಸಮಯವನ್ನು ಇಂದು 4 ಗಂಟೆಯವರೆಗೆ ವಿಸ್ತರಿಸಲಾಯಿತು.
ಅಂಗನವಾಡಿ ಕೇಂದ್ರ
By
Published : Aug 24, 2020, 3:54 PM IST
ಚಿಕ್ಕಮಗಳೂರು:ಕಟ್ಟಡ ಮತ್ತು ಸಿಬ್ಬಂದಿ ಕೊರತೆ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕಂದಮ್ಮಗಳು ನಲುಗುತ್ತಿವೆ. ಒಂದೊಂದು ಕಡೆ ಒಂದೊಂದು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಅವುಗಳ ಸಮರ್ಪಕ ನಿರ್ವಹಣೆಗೆ ಅಂಗನವಾಡಿ ಕಾರ್ಯಕರ್ತೆಯರು ಹೆಣಗಾಡುತ್ತಿದ್ದಾರೆ. ಅನುದಾನ ಕಾಲಕಾಲಕ್ಕೆ ಬಿಡುಗಡೆ ಆಗದಿರುವುದೇ ಅದಕ್ಕೆ ಕಾರಣ ಎನ್ನಲಾಗುತ್ತಿದೆ.
ಜಿಲ್ಲೆಯಲ್ಲಿ 1,825 ಅಂಗನವಾಡಿ ಕೇಂದ್ರಗಳ ಪೈಕಿ 70 ಬಾಡಿಗೆ ಮತ್ತು 1,555 ಸ್ವಂತ ಕಟ್ಟಡಗಳಲ್ಲಿ ಉಳಿದವು ಪಟ್ಟಣ ಪಂಚಾಯಿತಿ, ಗ್ರಾಪಂ ಸಮುದಾಯ ಭವನಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಲವೊಂದು ಕಟ್ಟಡಗಳು ಬಿರುಕು, ಶಿಥಿಲಗೊಂಡಿವೆ. ಹಾಗೆಯೇ, ಮಕ್ಕಳಿಗೆ ಆಟವಾಡಲು ವ್ಯವಸ್ಥೆ ಇರುವುದಿಲ್ಲ. ಇನ್ನೂ ಕೆಲ ಕೇಂದ್ರಗಳಿಗೆ ಮಳೆ ನೀರು ನುಗ್ಗುತ್ತಿದೆ. ಹೀಗೆ ಹಲವಾರು ಸಮಸ್ಯೆಗಳನ್ನು ಕಾಣಬಹುದು.
ಕಾರ್ಯಕರ್ತೆಯರಿಗೆ ₹10 ಸಾವಿರ ಹಾಗೂ ಸಹಾಯಕಿಯರಿಗೆ ₹ 6 ಸಾವಿರ ಗೌರವ ಧನ ನೀಡಲಾಗುತ್ತಿದೆ. ಗೌರವಧನ ತೆಗೆದು ಹಾಕಿ, ಕೆಲಸಕ್ಕೆ ಸರಿಯಾದ ವೇತನ ನೀಡಬೇಕು. ಉದ್ಯೋಗ ಭದ್ರತೆ, ಪಿಎಫ್ ಸೌಲಭ್ಯ ನೀಡಬೇಕು. ಪೂರ್ವ ಪ್ರಾಥಮಿಕ ಶಾಲೆ ಕಡ್ಡಾಯ ಮಾಡಬೇಕು ಎಂದು ಜಿಲ್ಲಾ ಅಂಗನವಾಡಿ ಸಂಘಟನೆ ಅಧ್ಯಕ್ಷೆ ರಾಧಾ ಸುಂದರೇಶ್ ಒತ್ತಾಯಿಸಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್
ತಾಯಿ ಮತ್ತು ಮಕ್ಕಳ ಅಪೌಷ್ಟಿಕತೆ ನಿಯಂತ್ರಿಸುವ ಉದ್ದೇಶದಿಂದ ಮಾತೃಪೂರ್ಣ ಯೋಜನೆಯಡಿ ₹21 ಕೋಟಿ ವೆಚ್ಚದಲ್ಲಿ ಮಧ್ಯಾಹ್ನದ ಬಿಸಿ ಊಟ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಪ್ರಸವದ ಗರ್ಭಿಣಿ-ಬಾಣಂತಿಯರಿಗೆ ಮೂರು ಕಂತುಗಳಲ್ಲಿ ನೇರ ನಗದು ವರ್ಗಾವಣೆ ಮೂಲಕ ₹5,000 ಸಹಾಯ ಧನ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 222 ಅಪೌಷ್ಟಿಕ ಮಕ್ಕಳಿದ್ದು, ವಾರ್ಷಿಕವಾಗಿ ತಲಾ ₹2,000 ವೆಚ್ಚದಲ್ಲಿ ಔಷಧೋಪಚಾರ ವ್ಯವಸ್ಥೆ ಮಾಡಲಾಗುತ್ತಿದೆ.