ಚಿಕ್ಕಮಗಳೂರು: ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಲು ದೇವಾಲಯ, ಮಸೀದಿ, ಚರ್ಚ್ಗಳಿಗೆ ತೆರಳುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನ ರೀತಿಯಲ್ಲಿ ಮಕ್ಕಳಿಗೆ ಅವರ ಪೋಷಕರ ಕೈಯಲ್ಲೇ ಶಾಲೆಯ ಆವರಣದಲ್ಲಿ ಅಕ್ಷರಭ್ಯಾಸ ಮಾಡಿಸಿರುವ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಹೌದು, ಮಕ್ಕಳ ಕೈಯಲ್ಲಿ ಅರಶಿನ ಕೊಂಬು, ಹಾಲು ಮತ್ತು ಚಂದನದ ನೀರಿನಿಂದ ಅದ್ದಿಸುವ ಮೂಲಕ ಅಕ್ಕಿಯ ಮೇಲೆ ಅಕ್ಷರಭ್ಯಾಸ ಮಾಡಿಸುವ ಮೂಲಕ ಸರ್ಕಾರಿ ಶಾಲೆಯಲ್ಲಿ ಎಲ್ಲಾ ಪುಟ್ಟ ಮಕ್ಕಳಿಗೂ ಅಕ್ಷರಭ್ಯಾಸ ಮಾಡಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನೂರಾರು ಜನ ಪೋಷಕರು ತಮ್ಮ ಮಕ್ಕಳಿಗೆ ಅಕ್ಷರಭ್ಯಾಸ ಮಾಡಿಸಿದ್ದಾರೆ. ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕೆಲ ಮಕ್ಕಳಿಗೆ ಅಕ್ಷರ ಅಭ್ಯಾಸ ಮಾಡಿಸಿದ್ದು, ನನಗೂ ಇದೇ ಮೊದಲ ಅಕ್ಷರಭ್ಯಾಸ ಕಾರ್ಯಕ್ರಮ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ನಂತರ ಮಾತನಾಡಿದ ಶಾಸಕಿ, ಮನೆಯೇ ಮೊದಲ ಪಾಠಶಾಲೆ ಎಂಬಂತೆ ತಂದೆ ತಾಯಿಯ ಕೈಯಲ್ಲಿ ಅಕ್ಷರಭ್ಯಾಸ ಮಾಡಿ, ನಂತರ ಶಾಲೆ ಕಲಿತು ಈಗ ರಾಜಕಾರಣಿಯಾಗಿದ್ದೇನೆ. ಆದರೇ ಮುತ್ತಿಗೆಪುರ ಶಾಲೆ ಕಳೆದ ವರ್ಷದಿಂದ ಎಲ್ಲರನ್ನೂ ಒಗ್ಗೂಡಿಸಿ ಅಕ್ಷರಭ್ಯಾಸ ಮಾಡಿಸುವ ಮೂಲಕ ಶಾಲೆಗೆ ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುತ್ತಿರುವುದು ಉತ್ತಮ ಕೆಲಸ. ನನ್ನ ಜೀವಮಾನದಲ್ಲೇ ಈ ರೀತಿಯ ಪ್ರಯತ್ನವನ್ನು ನೋಡುತ್ತಿರುವುದು ಇದೇ ಪ್ರಥಮ ಬಾರಿಗೆ. ಇದು ನನಗೆ ತಿಳಿದ ಮಟ್ಟಿಗೆ ದೇಶದ ಇತಿಹಾಸದಲ್ಲೇ ಪ್ರಥಮ ಸರ್ಕಾರಿ ಶಾಲೆಯಲ್ಲಿ ಅಕ್ಷರಭ್ಯಾಸ ಮಾಡಿಸುವ ಮೂಲಕ ದಾಖಲಾತಿ ಮಾಡಿಕೊಳ್ಳುತ್ತಿರುವುದು ಎಂದು ಸಂತಸ ವ್ಯಕ್ತಪಡಿಸಿದರು.