ಚಿಕ್ಕಮಗಳೂರು: 37 ಕೆರೆಗಳ ಊಳೆತ್ತದೇ, ಕೆರೆಗಳ ಅಭಿವೃದ್ಧಿ ಮಾಡದೇ ಹಣ ಡ್ರಾ ಮಾಡಿದ್ದ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಇಂಜಿನಿಯರ್ ಸಸ್ಪೆಂಡ್ ಆಗಿದ್ದಾರೆ. ಅಧಿಕಾರಿಗಳು, ಕಾಂಟ್ರ್ಯಾಕ್ಟರ್ಗಳು ಭ್ರಷ್ಟಾಚಾರ ಎಸಗಿದ್ದಾರೆಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದರು. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಜಿ.ಪ ಸಿಇಒ ಪ್ರಭು ಅವರು ಎಇಇ ಮಂಜುನಾಥ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
37 ಕೆರೆಗಳ ಅಭಿವೃದ್ಧಿಗೆ 23 ಲಕ್ಷ ರೂಪಾಯಿ ಹಣ ಬಿಡುಗಡೆಯಾಗಿತ್ತು. ಕೆಲಸವನ್ನೇ ಮಾಡದ ಗುತ್ತಿಗೆದಾರನ ಖಾತೆಗೆ ಇಂಜಿನಿಯರ್ ಮಂಜುನಾಥ್ ಹಣ ಜಮೆ ಮಾಡಿದ್ದರು. 37 ಕೆರೆಗಳಲ್ಲಿ 20 ಕೆರೆಗಳ ಬಳಿ ದಾಖಲೆಗಾಗಿ ಜೆಸಿಬಿ, ಟ್ರ್ಯಾಕ್ಟರ್ ನಿಲ್ಲಿಸಿ ಫೋಟೋ ಕೂಡ ತೆಗೆಸಿದ್ದರು. ಉಳಿದ 17 ಕೆರೆಗಳ ಬಳಿ ಹೋಗೇ ಇರಲಿಲ್ಲ. ಆದರೂ ಮಾರ್ಚ್ 15 ರಂದೇ ಹಣ ಡ್ರಾ ಮಾಡಿದ್ದರು. ಕೆರೆ ಬಳಿ ಸ್ಥಳಿಯರು ತೊಡಿದ್ದ ಗುಂಡಿಯನ್ನೂ ಸಹ ನಾವೇ ತೋಡಿದ್ದು ಎಂದು ಬಿಲ್ ಮಾಡಿಸಿಕೊಂಡಿದ್ದರು ಎನ್ನಲಾಗ್ತಿದೆ.