ನಟ ಚಂದ್ರಪ್ರಭಾ ಪ್ರತಿಕ್ರಿಯೆ ಚಿಕ್ಕಮಗಳೂರು:ಚಲಿಸುತ್ತಿದ್ದ ಸ್ಕೂಟಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಹಾಸ್ಯ ನಟ ಚಂದ್ರಪ್ರಭಾ ಅವರ ಕಾರು ಸ್ಕೂಟಿಗೆ ಡಿಕ್ಕಿಯಾಗಿದ್ದು, ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಾಯಾಳು ಯುವಕನನ್ನು ಹಾಸನದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಮಾಲ್ತೇಶ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾನೆ. ಸೋಮವಾರ (ಆ.4ರಂದು) ರಾತ್ರಿ ಘಟನೆ ಸಂಭವಿಸಿದ್ದು, ಗಾಯಾಳು ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ವಿಚಾರಣೆ ಸಂಬಂಧ ಪೊಲೀಸರು ಹಾಸ್ಯ ನಟ ಚಂದ್ರಪ್ರಭಾರನ್ನು ಸಂಪರ್ಕಿಸಿದ್ದು, ಶೋವೊಂದರ ರೆಕಾರ್ಡಿಂಗ್ ಹಿನ್ನೆಲೆ ಶುಕ್ರವಾರ ಪೊಲೀಸ್ ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಚಿಕ್ಕಮಗಳೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಟ ಚಂದ್ರಪ್ರಭಾ ಪ್ರತಿಕ್ರಿಯೆ:ಘಟನೆ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ನಟ ಚಂದ್ರಪ್ರಭಾ, ''ನಾನು ಶೂಟಿಂಗ್ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದಾಗ ಚಿಕ್ಕಮಗಳೂರು ಬಸ್ ನಿಲ್ದಾಣದ ಬಳಿ ಸ್ಕೂಟಿನಲ್ಲಿ ಬಂದ ವ್ಯಕ್ತಿ ಕಾರಿನ ಎಡಭಾಗಕ್ಕೆ ತಗುಲಿ ಕೆಳಗೆ ಬಿದ್ದರು. ನಾನೇ ಕಾರು ಡ್ರೈವ್ ಮಾಡುತ್ತಿದ್ದು, ಸ್ನೇಹಿತರೊಂದಿಗೆ ತೆರಳುತ್ತಿದ್ದೆ. ಕೆಳಗೆ ಬಿದ್ದ ವ್ಯಕ್ತಿಯನ್ನು ನನ್ನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಾರ್ಯಕ್ರಮ ಇರುವ ಅನಿವಾರ್ಯತೆ ಹಿನ್ನೆಲೆ ನಾನು ಅಲ್ಲಿಂದ ಹೊರಟೆ. ಬಳಿಕ ಇಂದು ಬೆಳಗ್ಗೆ ನನಗೆ ಪಿಎಸ್ಐ ಕರೆ ಮಾಡಿ, ಯುವಕನಿಗೆ ಗಂಭೀರ ಗಾಯವಾಗಿದ್ದು, ಪ್ರಕರಣ ದಾಖಲಾಗಿದೆ, ನೀವು ಕಾರಿನೊಂದಿಗೆ ವಿಚಾರಣೆಗೆ ಬರುವಂತೆ ತಿಳಿಸಿದರು. ಆದರೆ, ಶೂಟಿಂಗ್ ಇರುವ ಹಿನ್ನೆಲೆ ನನಗೆ ಬರಲಾಗುತ್ತಿಲ್ಲ, ಹೀಗಾಗಿ ಬಳಿಕ ಹಾಜರಾಗಲು ಅವಕಾಶ ಕೊಡಿ ಎಂದು ಕೇಳಿದ್ದೇನೆ. ಅದರಂತೆ ಅವಕಾಶ ನೀಡಿದ್ದಾರೆ''
''ಅಲ್ಲದೆ, ಶೂಟಿಂಗ್ನಲ್ಲಿರುವ ಹಿನ್ನೆಲೆ ಫೋನ್ನಲ್ಲಿ ಮಾತನಾಡಲಾಗದ ಕಾರಣ ನನ್ನ ಸ್ನೇಹಿತ ಸತೀಶ್ ಎಂಬುವರ ಫೋನ್ ನಂಬರ್ ಅನ್ನು ಪೊಲೀಸರಿಗೆ ಕೊಟ್ಟು ಮಾತನಾಡುವಂತೆ ಹೇಳಿದ್ದೇನೆ. ಅದರಂತೆ, ಸತೀಶ್ ಹಾಗೂ ಪೊಲೀಸರು ಈ ಬಗ್ಗೆ ಪರಸ್ಪರ ಮಾತನಾಡಿ ವಿಚಾರಿಸಿದ್ದಾರೆ. ಕಾನೂನು ಪ್ರಕಾರ ನಾನು ಯಾವುದೇ ವಿಚಾರಣೆಗೆ ಬದ್ಧನಾಗಿದ್ದೇನೆ. ಆದರೆ, ಕೆಲ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸುಳ್ಳು ಪೋಸ್ಟ್ ಹಾಕಲಾಗುತ್ತಿದೆ. ನಾನೇ ಸ್ಕೂಟಿಗೆ ಗುದ್ದಿ ಹಾಗೆಯೇ ತೆರಳಿದ್ದೇನೆ ಎಂದು ಹೇಳಲಾಗುತ್ತಿದೆ. ಆದರೆ, ಸಿಸಿಟಿವಿಯಲ್ಲಿ ಎಲ್ಲವೂ ಸೆರೆಯಾಗಿದೆ, ಅದಕ್ಕಿಂತ ಬೇರೆ ಯಾವುದೇ ಸಾಕ್ಷಿ ಬೇಕಿಲ್ಲ. ನನ್ನ ಕುಟುಂಬದ ಫೋಟೋ ಬಳಸಿ ಕೆಟ್ಟದಾಗಿ ಪೋಸ್ಟ್ ಮಾಡಲಾಗುತ್ತಿದೆ, ದಯವಿಟ್ಟು ಹೀಗೆಲ್ಲ ಮಾಡಬೇಡಿ'' ಎಂದು ಚಂದ್ರಪ್ರಭಾ ಕೇಳಿಕೊಂಡಿದ್ದಾರೆ.
ಯುವಕನ ಸಹೋದರನ ಆರೋಪ:ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಪಘಾತಕ್ಕೀಡಾದ ಯುವಕ ಮಾಲ್ತೇಶ್ ಸಹೋದರ ರಘು, ನಟ ಚಂದ್ರಪ್ರಭಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ''ನಟ ಚಂದ್ರಪ್ರಭಾ ಎಂಬುವರ ಕಾರು ಡಿಕ್ಕಿ ಹೊಡೆದಿದೆ. ನನ್ನ ತಮ್ಮನ ಮೇಲೆ ಮದ್ಯ ಸೇವನೆ ಮಾಡಿರುವ ಆರೋಪ ಮಾಡಿದ್ದು, ಆದರೆ ಆತ ಮದ್ಯ ಸೇವನೆ ಮಾಡುವುದೇ ಇಲ್ಲ. ಇದಕ್ಕೆ ನಾನೇ ಗ್ಯಾರಂಟಿ. ಅವರೇ ಆಸ್ಪತ್ರೆಗೆ ಸೇರಿಸಿದ್ದರೆ, ಮನೆಯವರು ಬರುವ ತನಕ ಆಸ್ಪತ್ರೆಯಲ್ಲೇ ಇರಬಹುದಿತ್ತು. ಆದರೆ ಅವರು ಆಸ್ಪತ್ರೆಗೆ ಸೇರಿಸಿಯೇ ಇಲ್ಲ. ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ತಾನೇ ಸೇರಿಸಿದ್ದೆಂದು ಸುಳ್ಳು ಹೇಳುತ್ತಿದ್ದಾರೆ. ಮೂರು ದಿನಗಳಾದರೂ ಚಂದ್ರಪ್ರಭಾ ಇದುವರೆಗೂ ಆಸ್ಪತ್ರೆಗೆ ಬರುವುದಾಗಲಿ, ಆರೋಗ್ಯ ವಿಚಾರಿಸುವ ಕೆಲಸವನ್ನೂ ಮಾಡಿಲ್ಲ. ಇಂದು ಬರುತ್ತೇನೆಂದು ಪೊಲೀಸರ ಬಳಿ ಹೇಳಿದ್ದವರು ಇನ್ನೂ ಬಂದಿಲ್ಲ, ಆಸ್ಪತ್ರೆಗೆ ಬಂದು ವಿಚಾರಿಸಬಹುದಿತ್ತಲ್ಲ'' ಎಂದು ರಘು ಆಕ್ರೋಶ ಹೊರಹಾಕಿದ್ದಾರೆ.
''ಸದ್ಯ ಹಾಸನದ ಆಸ್ಪತ್ರೆಗೆ ದಾಖಲಿಸಿದ್ದು, ತಲೆಗೆ ತೀವ್ರ ಗಾಯವಾಗಿದ್ದರಿಂದ ಸ್ಥಿತಿ ಗಂಭೀರವಾಗಿದೆ. ಸಹೋದರ ಮಾತನಾಡುವ ಸ್ಥಿತಿಯಲ್ಲಿಲ್ಲ, ಯಾರನ್ನೂ ಗುರುತಿಸುತ್ತಿಲ್ಲ, ಕೇವಲ ನೋಡುತ್ತಾನಷ್ಟೆ. 4 ದಿನಗಳವರೆಗೆ ಐಸಿಯುನಲ್ಲೇ ಚಿಕಿತ್ಸೆ ನೀಡುವ ಅಗತ್ಯವಿದೆ. ಹೀಗೆಯೇ ಮುಂದುವರೆದರೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಸಾಕಷ್ಟು ಹಣ ಖರ್ಚಾಗಿದೆ. ನಾನು ಬಾರ್ಬೆಂಡಿಂಗ್ ಕೆಲಸ ಮಾಡುತ್ತಿದ್ದು, ನಮ್ಮ ಅಪ್ಪ-ಅಮ್ಮ ರೈತರು. ನಾವು ಬಡವರು ಏನು ಮಾಡೋದು'' ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.