ಚಿಕ್ಕಮಗಳೂರು:ಜಿಲ್ಲೆಯ ಕಡೂರು ನಗರದ ಮಧ್ಯೆ ಇರುವ ಸಾರಿಗೆ ಬಸ್ ನಿಲ್ದಾಣದ ಶೌಚಗೃಹದಲ್ಲಿ ಮಹಿಳಾ ಕಾನ್ಸ್ಟೇಬಲ್ ಪೋನ್ ನಂಬರ್ ಬರೆದು ಅದರ ಮುಂದೆ ಲೈಂಗಿಕ ಕಾರ್ಯಕರ್ತೆ ಎಂದು ಬರೆದಿದ್ದ ಆರೋಪಿಯನ್ನು ಬೆಂಗಳೂರಿನ ಯಲಹಂಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಡೂರು ತಾಲ್ಲೂಕಿನ ಚಿಕ್ಕಂಗಳ ಗ್ರಾಮದ ಸಿ.ಎಂ. ಸತೀಶ್ ಬಂಧಿತ ಆರೋಪಿ. ಈತ ತನ್ನ ಸಹಪಾಠಿಗಳಿರುವ ವಾಟ್ಸಪ್ ಗ್ರೂಪಿಗೆ ಬೆಂಗಳೂರಿನ ಯಲಹಂಕದ ನ್ಯೂಟನ್ ಪೊಲೀಸ್ ಠಾಣೆಯ ಎಸಿಪಿ ಸಹಾಯಕ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್ಸ್ಟೇಬಲ್ ನಂಬರ್ ಅನ್ನು ಸೇರಿಸಿದ್ದಾರೆ. ನಂತರ ಅದರಲ್ಲಿ ಆಕೆಯನ್ನು ಉದ್ದೇಶಿಸಿ ಅನಗತ್ಯ ಸಂದೇಶಗಳನ್ನು ಹಾಕುತ್ತಿದ್ದ. ಜೊತೆಗೆ ಕರೆ ಮಾಡಿ ತೊಂದರೆ ಕೊಡುತ್ತಿದ್ದ ಎನ್ನಲಾಗಿದೆ. ಅಷ್ಟೇ ಅಲ್ಲದೆ ಇತರರಿಗೂ ನಂಬರ್ ನೀಡಿ ತೊಂದರೆಯುಂಟು ಮಾಡಿದ್ದಾನೆ ಎನ್ನಲಾಗಿದೆ.