ಕರ್ನಾಟಕ

karnataka

ETV Bharat / state

ಇದ್ದಕ್ಕಿದ್ದಂತೆ ಮಗುವಿನ ಅಪಹರಣ: ಮರಳಿ ತಾಯಿಯ ಮಡಿಲು ಸೇರಿದ ಕಂದಮ್ಮ! - Abduction case

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಹೆತ್ತಮ್ಮ-ಕರುಳ ಕುಡಿಯ ಪುನರ್ ಮಿಲನವಾಗಿತ್ತು. ಒಂದೆಡೆ ತಾಯಿಯ ಮೊಗದಲ್ಲಿ ಹೇಳಲು ಸಾಧ್ಯವಾದ ಖುಷಿ ಕಾಣಿಸುತ್ತಿದ್ದರೆ, ಕಂದನ ಕಣ್ಣಲ್ಲಿ ಯಾಕಮ್ಮ ನನ್ನ ಇಷ್ಟು ದಿನ ಬಿಟ್ಟಿದ್ದೆ ಅನ್ನೋ ದುಗುಡ ಕಾಣುತ್ತಿತ್ತು.

A baby Back to the mother's lap
ಮರಳಿ ತಾಯಿ ಮಡಿಲು ಸೇರಿದ ಕಂದಮ್ಮ

By

Published : Sep 17, 2020, 7:57 AM IST

ಚಿಕ್ಕಮಗಳೂರು: ಸಂತಸ ತುಂಬಿದ ಮನೆಯಲಿ ಇದ್ದಕ್ಕಿದ್ದಂತೆ ದುಃಖ ಮಡುಗಟ್ಟಿತ್ತು. ಹೆತ್ತು ಹೊತ್ತು ಸಾಕಿ ಸಲಹಿದ ಕಂದ ಕಿರಾತಕರ ಪಾಲಾಗಿದ್ದ. 9 ತಿಂಗಳ ಕಂದಮ್ಮನಿಗೆ ಕಿವಿ ಚುಚ್ಚಿಸುವ ಕುಟುಂಬದವರ ಸಂಭ್ರಮಕ್ಕೆ ಕಿರಾತಕರು ಕಲ್ಲು ಹಾಕಿದರು. ಕಿವಿ ಚುಚ್ಚಲು ಕರೆದುಕೊಂಡು ಹೋದ ಸಮಯದಲ್ಲೇ ಹೊಂಚು ಹಾಕಿ ಕಾಯುತ್ತಿದ್ದ ದುಷ್ಟರು, ಕಂದಮ್ಮನನ್ನ ಅಪಹರಿಸಿದ್ದರು. ಕೊನೆಗೆ ಕೈ ತಪ್ಪೇ ಹೋಯ್ತು ಅಂತಾ ಹೆತ್ತಮ್ಮ ಕಣ್ಣೀರಿಡುತ್ತಿರುವಾಗ ಪೊಲೀಸರು ಜೋಪಾನವಾಗಿ ಕಂದಮ್ಮನನ್ನ ತಾಯಿಯ ಮಡಿಲು ಸೇರಿಸಿದ್ದಾರೆ.

ಅಪಹರಣ ಪ್ರಕರಣ: ಮರಳಿ ತಾಯಿ ಮಡಿಲು ಸೇರಿದ ಕಂದಮ್ಮ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಹೆತ್ತಮ್ಮ-ಕರುಳ ಕುಡಿಯ ಪುನರ್ ಮಿಲನವಾಗಿತ್ತು. ಒಂದೆಡೆ ತಾಯಿಯ ಮೊಗದಲ್ಲಿ ಹೇಳಲು ಸಾಧ್ಯವಾದ ಖುಷಿ ಕಾಣಿಸುತ್ತಿದ್ದರೆ, ಕಂದನ ಕಣ್ಣಲ್ಲಿ ಯಾಕಮ್ಮ ನನ್ನ ಇಷ್ಟು ದಿನ ಬಿಟ್ಟಿದ್ದೆ ಅನ್ನೋ ದುಗುಡ ಕಾಣುತ್ತಿತ್ತು. ಪ್ರೇಮಾ-ರಾಜು ದಂಪತಿಯ 9 ತಿಂಗಳ ಕಂದ ಪ್ರೀತಂ. ಈ ಮಗುವಿಗೆ ಮೊನ್ನೆಯಷ್ಟೇ 9 ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಕಿವಿ ಚುಚ್ಚಿಸುವ ಕಾರ್ಯವನ್ನ ಕುಟುಂಬದವರು ಹಮ್ಮಿಕೊಂಡಿದರು. ಹೀಗಾಗಿ ಜ್ಯುವೆಲರಿ ಶಾಪ್​​ಗೆ ಹೋಗಿ ಮಗುವಿನ ಕಿವಿ ಚುಚ್ಚಿಸೋಣ ಅಂತಾ ಮಗುವಿನ ತಾಯಿ, ಅಜ್ಜಿ ಎಲ್ಲಾ ಬಾಳಯ್ಯನ ಹೊಸೂರು ಗ್ರಾಮದ ಮನೆಯಲ್ಲಿ ಪೂಜೆ ಮಾಡಿ ಅಜ್ಜಂಪುರಕ್ಕೆ ಬಂದಿದ್ದರು. ನಂತರ ಮಗುವಿಗೆ ಕಿವಿ ಚುಚ್ಚಿಸಿ ಖುಷಿಪಟ್ಟಿದ್ದರು ಅಷ್ಟೇ. ನೋಡ ನೋಡುತ್ತಿದ್ದಂತೆಯೇ ಮಗು ಕಾಣೆಯಾಗಿತ್ತು. ಎಲ್ಲಿ ನನ್ನ ಮಗು ಎಂದು ಹೆತ್ತಮ್ಮ, ಅಜ್ಜಿ ಎಲ್ಲಾ ಬಾಯಿ ಬಡಿದುಕೊಂಡಿದು, ಕಣ್ಣೀರು ಹಾಕಿದರೂ ಪ್ರಯೋಜವಾಗಲಿಲ್ಲ. ಮಗುವಿನ ಸುಳಿವೇ ಸಿಗಲಿಲ್ಲ. ಹೀಗೆ ಕಳೆದ 12ರಂದು ಕಳೆದುಹೋದ ಮಗು ಈಗ ಮತ್ತೆ ತಾಯಿಯ ಮಡಿಲು ಸೇರುವಂತಾಗಿದೆ.

ಅಷ್ಟಕ್ಕೂ ಮಗುವನ್ನ ಕದ್ದಿದ್ದು ಯಾರೋ ಅಪರಿಚಿತರಲ್ಲ. ಇದೇ ಕುಟುಂಬದ ಜೊತೆಯಲ್ಲಿದ್ದ ಆನಂದ್ ಹಾಗೂ ಪ್ರದೀಪ್ ಎಂಬ ಖತರ್ನಾಕ್ ಅಸಾಮಿಗಳು. ಮೂಲತಃ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಯಾದಪುರ ಗ್ರಾಮದವರು. ದೂರದ ಸಂಬಂಧಿಗಳಾಗಿದ್ದ ಇವರು ಸೆ. 12ರಂದು ಅಜ್ಜಂಪುರ ತಾಲೂಕಿನ ಬಾಳಯ್ಯನ ಹೊಸೂರು ಗ್ರಾಮಕ್ಕೆ ಬಂದಿದ್ದರು. ಕಿವಿ ಚುಚ್ಚಿಸುವಾಗ ಜ್ಯುವೆಲರಿ ಶಾಪ್​ನಲ್ಲಿ ಮಗುವಿನ ತಾಯಿಯ ಜೊತೆಗೆ ಬಂದಿದ್ದರು. ಮಗುವಿನ ಕಿವಿ ಚುಚ್ಚಿಸಿ ಆದ ಮೇಲೆ ತಾಯಿ ರೆಸ್ಟ್ ರೂಮ್​​ಗೆ ಹೋಗಿ ಬರುವಷ್ಟರಲ್ಲೇ ಮಗುವನ್ನು ಅಪಹರಿಸಿದ್ದರು ಎನ್ನಲಾಗಿದೆ.

ಎಲ್ಲಾ ಕಡೆ ಹುಡುಕಾಡಿದ ಕುಟುಂಬದವರು ಕೊನೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಅಪಹರಣ ದೂರು ದಾಖಲಿಸಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಅಜ್ಜಂಪುರ ಪೊಲೀಸರು, ಆನಂದ್ ಊರು ಸೇರಿದಂತೆ ಚಿತ್ರದುರ್ಗಕ್ಕೂ ಹೋಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪೊಲೀಸರು ಹುಡಕಾಟ ನಡೆಸುತ್ತಿದ್ದಾರೆ ಎಂಬ ಮಾಹಿತಿ ತಿಳಿದ ಐನಾತಿ ಕಿರಾತಕರಾದ ಆನಂದ್ ಹಾಗೂ ಪ್ರದೀಪ್, ಮಗುವನ್ನ ಯಾದಪುರದ ದೇವಾಸ್ಥಾನದ ಸಮೀಪ ಬಿಟ್ಟು ಕಾಲ್ಕಿತ್ತಿದ್ದಾರೆ. ಸದ್ಯ ಸುರಕ್ಷಿತವಾಗಿ ಮಗುವನ್ನ ಹೆತ್ತಮ್ಮನ ಮಡಿಲಿಗೆ ಸೇರಿಸಿರೋ ಪೊಲೀಸರು, ಪರಾರಿಯಾಗಿರೋ ಮಕ್ಕಳ ಕಳ್ಳರಿಗಾಗಿ ಬಲೆ ಬೀಸಿದ್ದಾರೆ.

ABOUT THE AUTHOR

...view details