ಚಿಕ್ಕಮಗಳೂರು:ನೈಸರ್ಗಿಕ ಸೌಂದರ್ಯದ ಸೊಬಗಿನ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೊಂಚ ಬಿಡುವು ನೀಡಿದ ಬಳಿಕ ಜಲಪಾತಗಳು ಮೈದುಂಬಿ ಹರಿಯುತ್ತಿವೆ. ಚಂದ್ರ ದ್ರೋಣ ಪರ್ವತ ಶ್ರೇಣಿಯ ಸೆರಗಲ್ಲಿರೋ ಅಬ್ಬುಗುಡಿಗೆ ಫಾಲ್ಸ್ ನಿಸರ್ಗದ ನೈಜ ಸೌಂದರ್ಯವನ್ನೇ ಅನಾವರಣಗೊಳಿಸಿದೆ.
ಕಳಸ ಸಮೀಪವಿರುವ ಅಬ್ಬುಗುಡಿಗೆ ಫಾಲ್ಸ್ ಹೌದು, ಇದು ಕಾಫಿನಾಡಲ್ಲಿ ಕಂಡು ಬರುವ ಸುಂದರ ದೃಶ್ಯಗಳು. ಈ ಸೌಂದರ್ಯ ಸವಿಯಲೆಂದೇ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಯನ್ನು ಭೂಲೋಕದ ಸ್ವರ್ಗ ಎಂದೂ ಹೇಳುತ್ತಾರೆ. ಒಮ್ಮೆ ಇಲ್ಲಿಗೆ ಭೇಟಿ ಕೊಟ್ಟರೆ ಸಾಕು ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ಇಲ್ಲಿನ ಫಾಲ್ಸ್ಗಳಲ್ಲಿ ಎಂಜಾಯ್ ಮಾಡಿದ್ರೆ ಪ್ರವಾಸಿಗರು ಕಾಫಿನಾಡ ಸೌಂದರ್ಯಕ್ಕೆ ಮತ್ತಷ್ಟು ಮಾರು ಹೋಗುತ್ತಾರೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಈ ಜಲಪಾತ ಹೊರ ಪ್ರಪಂಚಕ್ಕೆ ಅಷ್ಟಾಗಿ ಗೊತ್ತಿಲ್ಲ. ಆದ್ರೆ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿರೋ ಈ ಅಬ್ಬು ಗುಡಿಗೆ ಜಲಪಾತ ಕಳಸಾದಿಂದ ಕೇವಲ 5 ಕಿ.ಮೀ ದೂರದಲ್ಲಿದೆ. ಹಚ್ಚ ಹಸಿರಿನ ಕಾನನದ ಮಧ್ಯೆ ಹಾಲ್ನೋರೆಯಂತೆ ಧುಮ್ಮಿಕ್ಕುವ ಈ ಜಲಪಾತದ ಸೌಂದರ್ಯ ವರ್ಣಿಸಲು ಅಸಾಧ್ಯ.
ಕಳಸ ನಗರದಿಂದ ಐದು ಕಿ.ಮೀ ನಷ್ಟು ಸಾಗಿ ಬಳಿಕ ಅರ್ಧ ಕಿ.ಮೀ. ನಷ್ಟು ದೂರ ಕಾಲು ದಾರಿಯಲ್ಲಿ ನಡೆದು ಹೋದರೆ ನೀರಿನ ಸದ್ದು ಕೇಳೋದಕ್ಕೆ ಶುರುವಾಗುತ್ತೆ. ಸುಮಾರು 20-30 ಅಡಿ ಎತ್ತರದಿಂದ ಹಾಲ್ನೊರೆಯಂತೆ ಧುಮ್ಮಿಕ್ಕೋ ಜಲಪಾತ ನೋಡಲು ಎರಡೂ ಕಣ್ಣು ಸಾಲದು.
ಮಳೆಗಾಲದಲ್ಲಿ ಅಬ್ಬು ಗುಡಿಗೆ ಫಾಲ್ಸ್ನ ನೋಟವೇ ಬೇರೆ. ಈ ಫಾಲ್ಸ್ ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿದೆ. ಇಲ್ಲಿಗೆ ಬರುವವರು ಪ್ರವಾಸಿಗರು ಮೋಜು - ಮಸ್ತಿ ಮಾಡೋದರಿಂದ ಗ್ರಾಮಸ್ಥರಿಗೆ ಕಿರಿಕಿರಿಯಾಗುತ್ತಿದ್ದು, ಫಾಲ್ಸ್ಗೆ ಮೂಲ ಸೌಲಭ್ಯಗಳಿಲ್ಲ. ಈ ಫಾಲ್ಸ್ ಅಭಿವೃದ್ಧಿಯಾಗುತ್ತೆ. ಪ್ರವಾಸಿಗರು ಬರೋದ್ರಿಂದ ಗ್ರಾಮ ಅಭಿವೃದ್ಧಿಯಾಗುತ್ತೆ ಎಂದು ಭಾವಿಸಿದ್ದ ಗ್ರಾಮಸ್ಥರಿಗೆ ಪ್ರವಾಸಿಗರಿಂದ ಕಿರಿಕಿರಿಯೇ ಹೆಚ್ಚಾಗುತ್ತಿದೆ.
ಒಟ್ಟಾರೆಯಾಗಿ ಈ ಫಾಲ್ಸ್ ಸರಿಯಾಗಿ ಅಭಿವೃದ್ದಿಯಾದರೆ ಪ್ರಸಿದ್ದ ತಾಣವಾಗೋದರಲ್ಲಿ ಎರಡು ಮಾತಿಲ್ಲ. ಮಳೆಗಾಲದಲ್ಲಿ ಕಳಸ-ಹೊರನಾಡಿಗೆ ಭೇಟಿ ಕೊಡೋ ಪ್ರವಾಸಿಗರು ಕಳಸೇಶ್ವರ ಹಾಗೂ ಅನ್ನಪೂಣೇಶ್ವರಿಯ ದರ್ಶನ ಪಡೆದು ಫಾಲ್ಸ್ ಸೌಂದರ್ಯವನ್ನು ಸವಿಯುತ್ತಾರೆ. ಈ ಸ್ಥಳವನ್ನು ಇನ್ನಷ್ಟು ಅಭಿವೃದ್ದಿ ಮಾಡಿದರೆ ಮತ್ತು ಸ್ವಚ್ಚತೆಯನ್ನು ಕಾಪಾಡಿದರೆ ಈ ಫಾಲ್ಸ್ ಇನ್ನು ಅದ್ಭುತ ಪ್ರವಾಸಿ ತಾಣವಾಗೋದಂತೂ ನಿಜ.