ಕಾಂಬೋಡಿಯಾದಲ್ಲಿ ಸಿಲುಕಿದ ಕಾಫಿನಾಡು ಯುವಕ ಚಿಕ್ಕಮಗಳೂರು:ಕಾಂಬೋಡಿಯಾಗೆ ಕೆಲಸಕ್ಕೆಂದು ಹೋದ ಯುವಕನೋರ್ವ ಮೋಸದ ಜಾಲಕ್ಕೆ ಸಿಲುಕಿ, ಬಂಧಿಯಾಗಿರುವ ಘಟನೆ ನಡೆದಿದೆ. ಜಿಲ್ಲೆಯ ಬಾಳೆಹೊನ್ನೂರಿನ ಮಾಗುಂಡಿ ಸಮೀದ ಮಹಲ್ಗೋಡು ಗ್ರಾಮದ ಯುವಕ ಅಶೋಕ್ ಕಾಂಬೋಡಿಯಾದಲ್ಲಿ ಬಂಧಿಯಾಗಿರುವ ಯುವಕ.
ಏನಿದು ಪ್ರಕರಣ?: ಖಾಸಗಿ ಏಜೆನ್ಸಿವೊಂದರಿಂದ ಕ್ರೌನ್ ಕೆಸಿನೋ ಎಂಬ ಕಂಪೆನಿಯಲ್ಲಿ ಕೆಲಸಕ್ಕೆ ನೀವು ಆಯ್ಕೆಯಾಗಿದ್ದೀರಾ. ತಕ್ಷಣವೇ ನೀವು ಕಾಂಬೋಡಿಯಾಗೆ ಬರಬೇಕು, ತಿಂಗಳಿಗೆ 800 ಡಾಲರ್ ಸಂಬಳ ಎಂಬ ಆಫರ್ ಲೆಟರ್ ಒಂದು ಕಳೆದ ಮೂರು ತಿಂಗಳ ಹಿಂದೆ ಅಶೋಕ್ ಕೈ ಸೇರಿತ್ತು. ಇದನ್ನು ನಂಬಿ ಅಲ್ಲಿಗೆ ಹೋದ ಅಶೋಕ್ಗೆ ತಾನು ಮೋಸದ ಜಾಲಕ್ಕೆ ಸಿಲುಕಿರು ಅರಿವಾಗಿದೆ. ಅಲ್ಲಿ ಆತನಿಗೆ ಬೇರೆ ಕೆಲಸ ಮಾಡಿಸುತ್ತ ಚಿತ್ರ ಹಿಂಸೆ ನೀಡಲಾಗುತ್ತಿದೆ. ಹೇಗಾದರೂ ಮಾಡಿ ನನ್ನನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಿ ಎಂದು ಅಶೋಕ್ ತನ್ನ ಕುಟುಂಬ ಸದಸ್ಯರ ಬಳಿ ಅಂಗಲಾಚುತ್ತಿದ್ದಾನೆ.
ಈ ಕುರಿತು ಅಶೋಕನ ತಂದೆ ಸುರೇಶ್ ಮಾತನಾಡಿ, "ನನ್ನ ಮಗನನ್ನು ಏಗಾದರೂ ಮಾಡಿ ನಮಗೆ ಒಪ್ಪಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ನನ್ನ ಮಗನನ್ನು ಮರಳಿ ಭಾರತಕ್ಕೆ ಕಳುಹಿಸಲು 13 ಲಕ್ಷ ರೂ, ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ನಮ್ಮ ಬಳಿ ಅಷ್ಟು ಹಣ ಇಲ್ಲ. ಪ್ರತಿದಿನ ನನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಹಣ ನೀಡದಿದ್ದರೆ ನನ್ನ ಮಗನನ್ನು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಈ ಸಂಬಂಧ ಕ್ರಮ ಕೈಗೊಂಡು ನನ್ನ ಮಗನನ್ನು ಭಾರತಕ್ಕೆ ವಾಪಸ್ ಕರೆಸಬೇಕು" ಎಂದು ಮನವಿ ಮಾಡಿದ್ದಾರೆ.
ಭಾರತೀಯ ಮೂಲದ ಅಮಾಯಕ ಯುವಕರನ್ನು ಟೂರಿಸ್ಟ್ ವೀಸಾ ಮೂಲಕ ಕರೆ ತಂದು ಅದನ್ನು ಬ್ಯುಸಿನೆಸ್ ವೀಸಾಗೆ ಬದಲಾಯಿಸ್ತಾರೆ ಎಂಬ ಮಾಹಿತಿಯನ್ನು ಮೂಲಗಳು ತಿಳಿಸುತ್ತಿದ್ದು, ಅಲ್ಲಿಂದ ಒಂದು ವರ್ಷ ಕೆಲಸಕ್ಕೆ ತೆರಳಿದ ಈ ಯುವಕರನ್ನ ಬಂಧಿಯಾಗಿಸ್ತಾರೆ. 800 ಡಾಲರ್ ಸಂಬಳದ ಆಸೆ ಹುಟ್ಟಿಸಿ ಭಾರತೀಯ ಅಮಾಯಕ ಯುವಕರನ್ನು ಕರೆದುಕೊಂಡು ಹೋಗ್ತಾರೆ. ಅಲ್ಲಿ ಅವರನ್ನು ಒತ್ತೆಯಾಳಾಗಿರಿಸಿಕೊಂಡು ಅವರಿಂದಲೇ ಭಾರತೀಯರಿಗೆ ಮೋಸ ಮಾಡಿಸುವ ಕೆಲಸಕ್ಕೆ ಕೈ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋ ಯುವಕ ಅಶೋಕ್ ತನ್ನನ್ನು ಭಾರತಕ್ಕೆ ಕರೆ ತರುವಂತೆ ಮನವಿ ಮಾಡಿದ್ದಾನೆ. ಇದರ ನಡುವೆ ಕೊಪ್ಪ ಮೂಲದ ಯುವಕನೊಬ್ಬ ತಾನು ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರೋದಾಗಿ ಬಾಳೆಹೊನ್ನೂರಿನ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಹಿಳೆ ಸಾವು: ಕುಡಿದ ಮತ್ತಿನಲ್ಲಿ ಆಸ್ಪತ್ರೆ ಸಿಬ್ಬಂದಿಯಿಂದ ಚಿಕಿತ್ಸೆ ಆರೋಪ.. ಕುಟುಂಬಸ್ಥರ ಪ್ರತಿಭಟನೆ