ಚಿಕ್ಕಮಗಳೂರು :ಖಾಸಗಿ ಬಸ್ವೊಂದು ಚಾಲಕನ ನಿಯಂತ್ರಣ ತಪ್ಪಿ ಕಾಫಿ ತೋಟದ ಕಂದಕಕ್ಕೆ ಉರುಳಿ ಬಿದ್ದು, ಒಬ್ಬ ಮಹಿಳೆ ಮೃತಪಟ್ಟಿದ್ದು, ಬಸ್ನಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 4.30ರ ಸುಮಾರಿಗೆ ಈ ಘಟನೆ ಜರುಗಿದೆ.
ಬೆಂಗಳೂರಿನಿಂದ ಹೊರನಾಡು ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಬೇಲೂರು ಮೂಡಿಗೆರೆ ರಸ್ತೆಯ ಮಧ್ಯದಲ್ಲಿ ಬರುವ ಚೀಕನಹಳ್ಳಿ - ಕಸ್ಕೇಬೈಲ್ ನಡುವಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು, ಕಾಫಿ ತೋಟದ ಕಂದಕಕ್ಕೆ ಉರುಳಿದೆ. ಸುಮಾರು 100 ಅಡಿ ಆಳಕ್ಕೆ ಉರುಳಿ ಬಿದ್ದಿದೆ.
ಈ ಸಂದರ್ಭದಲ್ಲಿ ಬಸ್ನ ಕಿಟಿಕಿಯಿಂದ ಹೊರಗೆ ಹಾರಿ ಬಿದ್ದ ಸುರೇಖಾ (47) ಎಂಬುವರು ಬಸ್ಸಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಪುರುಷ ಗಂಭೀರವಾಗಿ ಗಾಯಗೊಂಡಿದ್ದಾರೆ. 10 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೀರಭದ್ರೇಶ್ವರ ಎಂಬ ಖಾಸಗಿ ಬಸ್ನಲ್ಲಿ ಸುಮಾರು 48 ಮಂದಿ ಪ್ರಯಾಣಿಕರು ಹೊರನಾಡು ಪ್ರವಾಸ ಹೊರಟ್ಟಿದ್ದರು ಎಂದು ತಿಳಿದು ಬಂದಿದೆ.