ಚಿಕ್ಕಮಗಳೂರು:ಈತ ಮೋಜಿನ ಕಳ್ಳ. ಒಬ್ಬನ್ನೇ ಹೋಗಿ ಸಲೀಸಾಗಿ ಕೃತ್ಯ ಮಾಡಿ ಬರ್ತಿದ್ದ. ಕದ್ದ ದುಡ್ಡಲ್ಲಿ ಬೆಟ್ಟಿಂಗ್, ಜೂಜೂ ಆಡೋ ಖಯಾಲಿ. ಪರಿಚಿತ ಮಹಿಳೆಯರನ್ನ ಪುಸಲಾಯಿಸಿ ಅವರ ಕೈಯಲ್ಲಿ ಕದ್ದ ಒಡವೆ ಅಡಮಾನವಿಡುತ್ತಿದ್ದ. 35 ಕ್ಕೂ ಹೆಚ್ಚು ಕೇಸ್ ಇರೋ ಈತ ರಾಜ್ಯ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಲಿಸ್ಟ್ಲ್ಲಿದ್ದ. ಸದ್ಯ ಈ ಚಾಲಾಕಿ ಕಳ್ಳ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಹಾಸನ ಮೂಲಕದ ಸಂತೋಷ್ (30) ಬಂಧಿತ ಆರೋಪಿ. ಚಿಕ್ಕಮಗಳೂರು 6, ಮಂಡ್ಯ 2, ಹಾಸನ-ತುಮಕೂರು - ಮೈಸೂರಲ್ಲಿ ತಲಾ ಒಂದು ಕೇಸಲ್ಲಿ ಪೊಲೀಸರಿಗೆ ಬೇಕಾಗಿದ್ದ. ರಾಮನಗರದಲ್ಲಿ 18 ಕೇಸ್ ಮುಗಿಸಿ 2021ರ ಸೆಪ್ಟಂಬರ್ನಲ್ಲಷ್ಟೇ ಜೈಲಿನಿಂದ ಬಂದಿದ್ದ ಈತನ ಮೇಲೆ 35ಕ್ಕೂ ಹೆಚ್ಚು ಕೇಸ್‍ಗಳಿವೆ. ಕದ್ದ ಹಣದಲ್ಲೇ ಹಾಸನದಲ್ಲಿ ಒಂದೊಳ್ಳೆ ಮನೆ ಕೂಡ ಕಟ್ಟಿದ್ದಾನೆ. ಕದ್ದು ಜೂಜು, ಬೆಟ್ಟಿಂಗ್ ಆಡ್ತಿದ್ದ. ಹಣ ಖಾಲಿಯಾದ ಬಳಿಕ ಮತ್ತೊಂದು ರೌಂಡ್.
ಹೀಗೆ ಅರ್ಧ ಕರ್ನಾಟಕದಲ್ಲಿ ಬೀಗ ಹಾಕಿರೋ ಮನೆಗಳನ್ನ ಕದ್ದಿದ್ದನಂತೆ. ಚಿಕ್ಕಮಗಳೂರಿನ ದಂಟರಮಕ್ಕಿ-ಮೂಗ್ತಿಹಳ್ಳಿಯಲ್ಲಿ ಕಳೆದ ತಿಂಗಳು ಕಳ್ಳತನವಾಗಿತ್ತು. ಎರಡೂ ಕಳ್ಳತನ ಶೈಲಿ ಒಂದೇ ರೀತಿಯಲ್ಲಿತ್ತು. ಪೊಲೀಸರು ಫಿಂಗರ್ ಪ್ರಿಂಟ್ ಆಧಾರದ ಮೇಲೆ ಇವನ ಟ್ರಾಕ್ ರೆಕಾರ್ಡ್ ಬೆನ್ನತ್ತಿ ಖೆಡ್ಡಾಗೆ ಕೆಡವಿದ್ದಾರೆ. ಜೊತೆಗೆ ಆತನಿಂದ ನಗದು ಸೇರಿ 52 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.