ಚಿಕ್ಕಮಗಳೂರು: ಕೊರೊನಾದಿಂದ ಮಕ್ಕಳು ಶಾಲೆಯ ಮೆಟ್ಟಿಲನ್ನೇ ಹತ್ತದ ಹಾಗಾಗಿದೆ. ಕೊರೊನಾ ಈಗ ಹೋಗುತ್ತೆ, ಆಗ ಹೋಗುತ್ತೆ ಎನ್ನುವ ಭರವಸೆಯಲ್ಲೇ ಒಂದುವರೆ ವರ್ಷ ಕಳೆದಾಗಿದೆ. ಆದರೆ ಕೊರೊನಾ ಮಾತ್ರ ನಮ್ಮಿಂದ ದೂರವಾಗುವ ಯಾವುದೇ ಲಕ್ಷಣಗಳು ಕಾಣ್ತಿಲ್ಲ. ಪುಟ್ಟ ಮಕ್ಕಳಂತೂ ತಮ್ಮ ಸ್ನೇಹಿತರನ್ನ, ಅಚ್ಚುಮೆಚ್ಚಿನ ಶಿಕ್ಷಕರನ್ನ ತುಂಬಾನೇ ಮಿಸ್ ಮಾಡ್ಕೊಳೋ ಹಾಗಾಗಿದೆ.
ಆದ್ರೆ ಕಾಫಿನಾಡಿನ ಆ ಶಿಕ್ಷಕಿ ಮಾತ್ರ ಮನೆಯಲ್ಲಿ ಕುಳಿತಿರುವ ಪ್ರತಿಯೊಬ್ಬ ಮಕ್ಕಳಿಗೂ ಪತ್ರ ಬರೆದು ಆತ್ಮಸ್ಥೈರ್ಯ ತುಂಬಿದಲ್ಲದೇ ಯೋಗಕ್ಷೇಮವನ್ನೂ ವಿಚಾರಿಸಿದ್ದಾರೆ. ಈ ಮೂಲಕ ಕೊರೊನಾದಿಂದ ಮನೆಯಲ್ಲಿರುವ ಮಕ್ಕಳ-ಶಿಕ್ಷಕರ ಬಾಂಧವ್ಯವನ್ನ ಗಟ್ಟಿಗೊಳಿಸುವ ಒಂದು ಸುಂದರ ಪ್ರಯತ್ನ ಮಾಡಿದ್ದಾರೆ.
ಕೋವಿಡ್ನಿಂದ ಜಾಗೃತರಾಗಿರುವಂತೆ ವಿದ್ಯಾರ್ಥಿಗಳಿಗೆ ಪತ್ರ ಬರೆದ ಶಿಕ್ಷಕಿ ಗೀತ ಕೊರೊನಾದಿಂದ ಜನರೆಲ್ಲರೂ ಮನೆಯಲ್ಲೇ ಕೂರುವಂತಾಗಿದೆ. ಹೊರಗೆ ಕಾಲಿಟ್ರೆ ಎಲ್ಲಿ ಮಾರಿ ಮನೆಗೆ ಬರುತ್ತೋ ಎಂಬ ಆತಂಕ ಎಲ್ಲರನ್ನ ಆವರಿಸಿದೆ. ಅದ್ರಲ್ಲೂ ಚಿಕ್ಕ ಮಕ್ಕಳು, ವಿದ್ಯಾರ್ಥಿಗಳ ಪಾಡಂತೂ ಕೇಳೋದೇ ಬೇಡ. ಒಂದ್ಕಡೆ ಕೂತಲ್ಲಿ ಕೂರದ ಮಕ್ಕಳು, ಕೊರೊನಾದಿಂದಾಗಿ ಮನೆಯಲ್ಲಿಯೇ ಇರುವಂತಾಗಿದೆ. ಆಟ ಪಾಟಗಳಲ್ಲಿ ಕಾಲ ಕಳೆಯಬೇಕಿದ್ದ ಮಕ್ಕಳು ಜೈಲಿನಲ್ಲಿರುವಂತಾಗಿದೆ. ಶಾಲೆಗೆ ಹೋಗಲಾರದೇ ತಮ್ಮ ಸ್ನೇಹಿತರು, ಅಚ್ಚುಮೆಚ್ಚಿನ ಶಿಕ್ಷಕರನ್ನ ತುಂಬಾನೇ ಮಿಸ್ ಮಾಡಿಕೊಳ್ತಿದ್ದಾರೆ.
ಹೀಗಾಗಿ ಚಿಕ್ಕಮಗಳೂರು ತಾಲೂಕಿನ ಯಲಗುಡಿಗೆ ಪ್ರಾಥಮಿಕ ಶಾಲೆಯ ಗೀತಾ ಎಂಬ ಶಿಕ್ಷಕಿ ತನ್ನ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರೀತಿಯ ಪತ್ರವೊಂದನ್ನ ಬರೆದು ಸರ್ಪ್ರೈಸ್ ಕೊಟ್ಟಿದ್ದಾರೆ. ತಾನು ಮನೆಯಲ್ಲಿರಬೇಕಾದ್ರೆ ತನ್ನ ಹೆಸರಿಗೆ ಪತ್ರ ಬರೆದ ಅಚ್ಚುಮೆಚ್ಚಿನ ಟೀಚರ್ ಬಗ್ಗೆ ಮಕ್ಕಳ ಸಂಭ್ರಮಕ್ಕೆ ಪಾರವೇ ಇಲ್ಲ. ಮಕ್ಕಳ ಖುಷಿಯನ್ನ ಕಂಡ ಪೋಷಕರು ಟೀಚರ್ಗೆ ವಿಚಾರ ಮುಟ್ಟಿಸಿ ಮಕ್ಕಳ ಅಭಿಮಾನವನ್ನ ತಿಳಿಸಿದ್ದಾರೆ.
ಪ್ರತಿಯೊಬ್ಬ ವಿದ್ಯಾರ್ಥಿಗಳ ಜೊತೆಗೆ ಶಾಲೆಯಲ್ಲಿನ ನೆನಪುಗಳನ್ನ ಸ್ಮರಿಸಿ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ್ದಾರೆ. ಒಂದು ವರ್ಷದಿಂದ ಶಾಲೆಯ ಬಾಗಿಲು ಹಾಕಿದ್ರೂ ಆಗಾಗ ತಾವು ಪಾಠ ಮಾಡಿ ಕಳಿಸುತ್ತಿರುವ ವಿಡಿಯೋ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಾನು ಬರೆದ ಪತ್ರವನ್ನ ಓದಿ ಮಕ್ಕಳು ಖುಷಿಯಾಗಿರುವುದನ್ನು ಕೇಳಿ ಶಿಕ್ಷಕಿ ಗೀತಾ ಸಂತಸ ಪಟ್ಟಿದ್ದಾರೆ.
ಪತ್ರದಲ್ಲಿ ಕೇವಲ ಮಕ್ಕಳ ಯೋಗಕ್ಷೇಮವನ್ನ ಮಾತ್ರ ಕೇಳದೇ ಕೊರೊನಾದ ಬಗ್ಗೆಯೂ ಎಚ್ಚರ ವಹಿಸುವಂತೆ ಕಿವಿಮಾತು ಹೇಳಿದ್ದಾರೆ. ರಜೆ ಇರೋದ್ರಿಂದ ಹೊರಗಡೆ ಬಾವಿ, ಕೆರೆ, ದೂರದ ಸ್ಥಳಗಳಿಗೆ ಆಟವಾಡುವುದಕ್ಕೆ ಹೋಗದಂತೆ ಪತ್ರದಲ್ಲಿ ಹೇಳಿದ್ದಾರೆ. ಜೊತೆಗೆ ಮೊಬೈಲ್ ಕೂಡ ಅಗತ್ಯಕ್ಕಿಂತ ಹೆಚ್ಚು ಬಳಸದಂತೆ ಮಕ್ಕಳಿಗೆ ತಿಳಿ ಹೇಳಿದ್ದಾರೆ. ಅಲ್ಲದೆ ನಾವೆಲ್ಲಾ ಆರೋಗ್ಯವಾಗಿದ್ದೇವೆ, ನೀವು ಕೂಡ ಕ್ಷೇಮವಾಗಿರಿ ಮಿಸ್ ಅಂತಾ ಮಕ್ಕಳು ಪ್ರೀತಿಯಿಂದ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ:ಮಕ್ಕಳ ಭವಿಷ್ಯಕ್ಕೆ ಬೆಳಕಾದ ಗುರು.. ವಿದ್ಯಾರ್ಥಿಗಳ ಹೆಸರಲ್ಲಿ ಬ್ಯಾಂಕ್ ಠೇವಣಿ ತೆರೆದ ಶಿಕ್ಷಕಿ