ಚಿಕ್ಕಮಗಳೂರು: ತಾಲೂಕಿನ ಮಲ್ಲಂದೂರು ಸಮೀಪದ ಗಿರೀಶ್ ಎಂಬುವರ ತೋಟದಲ್ಲಿ ವಿಚಿತ್ರ ಅಣಬೆವೊಂದು ಹುಟ್ಟಿದೆ. ನಿನ್ನೆ ಸಂಜೆ ಕಾಣದ ಈ ಅಣಬೆ ಬೆಳಗಾಗುವಷ್ಟರಲ್ಲಿ ವಿಚಿತ್ರವಾಗಿ ಬೆಳೆದಿದ್ದು, ನೋಡುಗರ ಕೌತುಕಕ್ಕೆ ಕಾರಣವಾಗಿದೆ. ಈ ರೀತಿಯ ಅಣಬೆಗಳು ತುಂಬಾ ವಿರಳ. ಇದನ್ನು ಮೆಟ್ಟಿಲು ಅಣಬೆ ಅಥವಾ ಬಲೆ ಅಣಬೆ ಅಂತಾನೂ ಕರೆಯುತ್ತಾರೆ. ಗುಡುಗು, ಸಿಡಿಲು, ಮಿಂಚು ಬರುವ ವೇಳೆ ಈ ರೀತಿಯ ಅಣಬೆಗಳು ಹುಟ್ಟುತ್ತವೆ ಅನ್ನೋದು ಸ್ಥಳೀಯರ ಮಾತು.
''ನಿನ್ನೆ ಸಂಜೆ ತಾಲೂಕಿನ ಮಲೆನಾಡು ಭಾಗದಲ್ಲಿ ಸಮೃದ್ಧ ಮಳೆಯಾಗಿದೆ. ಮಲ್ಲಂದೂರು ಭಾಗದಲ್ಲಿ ಗುಡುಗು, ಮಿಂಚು, ಸಿಡಿಲು ಸಹಿತ ಮಳೆ ಸುರಿಸಿದೆ. ಹಾಗಾಗಿ, ನಿನ್ನೆ ಸಂಜೆ ಇಲ್ಲದ ಈ ಅಣಬೆ ಬೆಳಗಾಗುವಷ್ಟರಲ್ಲಿ ಈ ರೀತಿಯಾಗಿ ಬೆಳೆದಿದೆ. ಇತ್ತೀಚೆಗೆ ಈ ರೀತಿಯ, ಇಷ್ಟು ದೊಡ್ಡ ಬಲೆ ಅಣಬೆ ನಾವು ನೋಡಿರಲಿಲ್ಲ. ಮಳೆ ಕೊರತೆ ಇರಬಹುದು. ಆದರೆ, ಈಗ ಮಳೆ ಸುರಿಯುತ್ತಿದೆ. ಇದರಿಂದ ಈ ರೀತಿಯ ಬಲೆ ಅಣಬೆ ಹುಟ್ಟಿರಬಹುದು ಅಂತ ಸ್ಥಳೀಯರು ಮಾತನಾಡುತ್ತಿದ್ದಾರೆ'' ಎಂದು ಗಿರೀಶ್ ತಮ್ಮ ಕೌತುಕ ಹೇಳಿಕೊಂಡಿದ್ದಾರೆ.