ಚಿಕ್ಕಮಗಳೂರು:ಕೃಷಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಡೈನಾಮೈಟ್ ಸ್ಫೋಟದಿಂದ ಸಿಡಿದ ಕಲ್ಲಿನಿಂದ ಕಾಲು ಕಳೆದುಕೊಂಡಿರುವ ಘಟನೆ ಕಡೂರು ತಾಲೂಕಿನ ಸೇವಾಪುರ ಗ್ರಾಮದಲ್ಲಿ ನಡೆದಿದೆ. ಕೃಷಿ ಕೆಲಸ ಮುಗಿಸಿ ಜಮೀನಿನಿಂದ ಮನೆಗೆ ಬರುತ್ತಿದ್ದ ಸಿದ್ದಾನಾಯಕ್ ಎಂಬವರು ಕಲ್ಲು ಕ್ವಾರಿ ಬಳಿ ಬರುತ್ತಿದ್ದಂತೆ ಕ್ವಾರಿಯಲ್ಲಿಟ್ಟಿದ್ದ ಡೈನಾಮೈಟ್ ಸ್ಪೋಟಗೊಂಡು ಕಲ್ಲು ಸಿಡಿದಿವೆ. ಇದರಿಂದ ಸಿದ್ದಾನಾಯಕ್ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು, ಪ್ರಜ್ಞೆ ತಪ್ಪಿ ಇಡೀ ರಾತ್ರಿ ಅಲ್ಲೇ ಬಿದ್ದಿದ್ದಾರೆ.
ಬೆಳಿಗ್ಗೆ ಮನೆಯವರು ಹುಡುಕಿಕೊಂಡು ಹೋದಾಗ ಕ್ವಾರಿ ಬಳಿ ಪ್ರಜ್ಞಾಹೀನ ಸ್ಥತಿಯಲ್ಲಿ ಕಂಡು ಬಂದಿದ್ದಾರೆ. ಕಲ್ಲು ಸಿಡಿದ ರಭಸಕ್ಕೆ ಕೈ ಕಾಲು ಹಾಗೂ ಎದೆ ಭಾಗಕ್ಕೆ ತೀವ್ರ ಗಾಯವಾಗಿದ್ದು ಕಡೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಎಡ ಗಾಲು ಸಂಪೂರ್ಣ ಹಾನಿ ಆಗಿದೆ ಎಂದು ಹೇಳಿದ್ದಾರೆ.
ತಂಗಲಿ ಗ್ರಾಮ ಪಂಚಾಯಿತಿಯಲ್ಲಿ ಅನುಮತಿ ಪಡೆಯದೇ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಸ್ಥಳಿಯರು ಆರೋಪಿಸಿದ್ದಾರೆ. ಈ ಬಗ್ಗೆ ಇಂದು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸ್ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದು, ಸಿದ್ದನಾಯಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಅವರ ಆರೋಗ್ಯ ಸುಧಾರಿಸಿದ ನಂತರ ಅವರ ಬಳಿ ಮಾಹಿತಿ ಪಡೆದು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.