ಚಿಕ್ಕಮಗಳೂರು:ಆನೆ ಕಾಡಿಗಟ್ಟುವ ಕಾರ್ಯಾಚರಣೆ ವೇಳೆ ಆನೆ ದಾಳಿಯಿಂದ ಮೃತಪಟ್ಟ ನೌಕರ ಕಾರ್ತಿಕ್ ಗೌಡ ಅವರ ಅಂತಿಮ ದರ್ಶನದ ವೇಳೆ ಅವರು ಸಾಕಿದ ಶ್ವಾನ ದುಃಖಿತವಾಗಿರುವುದು ಕಂಡುಬಂತು. ಕಾರ್ತಿಕ್ ಗೌಡ ಅವರ ಮುದ್ದಿನ ಸಾಕು ನಾಯಿ ತನ್ನ ಒಡೆಯನ ಪಾರ್ಥಿವ ಶರೀರದೆದುರು ಕಣ್ಣೀರು ಹಾಕಿತು.
ಮೂಡಿಗೆರೆ ತಾಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ಆನೆಯನ್ನು ಕಾಡಿಗಟ್ಟುತ್ತಿದ್ದ ಸಂದರ್ಭದಲ್ಲಿ ಆನೆ ಕಾರ್ಯಾಚರಣೆ ಪಡೆಯ ನೌಕರ ಕಾರ್ತಿಕ್ ಗೌಡ ಮೇಲೆ ಕಾಡಾನೆ ದಾಳಿ ಮಾಡಿದ್ದರಿಂದ ಅವರು ಮೃತಪಟ್ಟಿದ್ದರು. ಮರಣೋತ್ತರ ಪರೀಕ್ಷೆಯ ನಂತರ ಕಾರ್ತಿಕ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಗೌಡಹಳ್ಳಿಯ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆಯಿಂದಲೂ ಸಾವಿರಾರು ಜನರು ತಂಡೋಪ ತಂಡವಾಗಿ ಆಗಮಿಸಿ ಕಾರ್ತಿಕ್ ಗೌಡ ಅವರ ಅಂತಿಮ ದರ್ಶನ ಪಡೆದರು.
ಕಾರ್ತಿಕ್ ಗೌಡ ಅವರು ಮುದ್ದಿನಿಂದ ಸಾಕಿದ್ದ ಅವರ ಸಾಕುನಾಯಿ ಚಾರ್ಲಿ ಮನೆಯಂಗಳದ ಗೂಡಿನಲ್ಲಿ ಮೂಕ ಪ್ರೇಕ್ಷಕನಾಗಿ ಮನೆಯೆದುರು ನಡೆಯುತ್ತಿದ್ದ ಸನ್ನಿವೇಶವನ್ನು ಗಮನಿಸುತ್ತಿತ್ತು. ಇಷ್ಟೊಂದು ಜನರಿದ್ದರೂ ತನ್ನ ಯಜಮಾನ ಮಾತ್ರ ಕಣ್ಣಿಗೆ ಬೀಳದೇ ಇದ್ದುದ್ದರಿಂದ ಒಂದು ರೀತಿಯಲ್ಲಿ ವಿಚಲಿತವಾಗಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು. ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ನಾಯಿಯನ್ನು ಬೋನ್ನಿಂದ ಹೊರ ತಂದ ತಕ್ಷಣ ತನ್ನ ಒಡೆಯನ ಪಾರ್ಥೀವ ಶರೀರದೆದುರು ಬಂದು ಭಾವುಕವಾಗಿ ಕಣ್ಣೀರು ಹಾಕಿತು.