ಚಿಕ್ಕಮಗಳೂರು:ಚಾಲಕನ ನಿಯಂತ್ರಣ ತಪ್ಪಿ ಕಾರು ಅಪಘಾತವಾಗಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ನಡೆದಿದೆ. ಕೋಲಾರದಿಂದ ಹೊರನಾಡಿಗೆ ಹೋಗುತ್ತಿದ್ದ ಕಾರು ಕಲ್ಮಕ್ಕಿ ಗ್ರಾಮದಲ್ಲಿ ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಎತ್ತರದಿಂದ ಮನೆಯ ಮುಂಭಾಗಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಒಂಬತ್ತು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಗಾಯಾಳುಗಳನ್ನು ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಳಸ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಡಿಕ್ಕಿಯಾಗಿ ಬೈಕ್ ಸವಾರನ ಸ್ಥಿತಿ ಗಂಭೀರ:ಕಾರು ಮತ್ತು ಬೈಕ್ನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕುದುರೆಮುಖದ ನಲ್ಲಿಬೀಡು ಎಂಬಲ್ಲಿ ನಡೆದಿದೆ. ಕಾರು ಚಾಲಕನ ಅತಿ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಘಟನೆ ನಡೆದ ತಕ್ಷಣ ಸ್ಥಳೀಯರು ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಕುದುರೆಮುಖ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಾರ್ಕಳ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸದ್ಯ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.