ಚಿಕ್ಕಮಗಳೂರು: ಕಾಫಿ ಉದ್ಯಮವು ಹಲವಾರು ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದು, ಇದನ್ನು ಆಶ್ರಯಿಸಿರುವ ಬೆಳೆಗಾರರು ಮತ್ತು ಕಾರ್ಮಿಕರ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯರು ಮನವಿ ಮಾಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಕಾಫಿ ಬೆಳೆಯುವ ಪ್ರದೇಶದಲ್ಲಿ ಅತಿವೃಷ್ಟಿ ಸಂಭವಿಸಿದೆ. ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ ಕಾಫಿ ಬೆಳೆಯಲ್ಲಿ ಶೇ. 35ರಿಂದ 70ರಷ್ಟು ನಷ್ಟ ಸಂಭವಿಸಿದೆ. ಕಾಫಿ ಬೆಳೆಗಾರರಿಗೆ ಈಗಲೂ 1993ರ ಬೆಲೆಯೇ ಸಿಗುತ್ತಿದ್ದು, ಕಾಫಿ ತೋಟ ನಿರ್ವಹಣೆ ಮಾಡುವುದೂ ಕಷ್ಟವಾಗಿದೆ. ಕಳೆದ ಐದು ವರ್ಷಗಳ ಕಾಫಿ ಬೆಲೆಯನ್ನು ಗಣನೆಗೆ ತೆಗೆದುಕೊಂಡರೆ ಅರೇಬಿಕಾ ಕಾಫಿಗೆ ಶೇ. 38 ಹಾಗೂ ರೋಬಸ್ಟಾ ಕಾಫಿಗೆ ಶೇ. 8ರಷ್ಟು ನಷ್ಟ ಉಂಟಾಗಿದೆ.
ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್-19 ವೈರಸ್ ಕಾಫಿ ಉದ್ಯಮದ ಮೇಲೂ ದುಷ್ಪರಿಣಾಮ ಬೀರಿದ್ದು, ರೋಗ ನಿಯಂತ್ರಣಕ್ಕಾಗಿ ಸರ್ಕಾರ ಜಾರಿ ಮಾಡಿದ ಲಾಕ್ಡೌನ್ನಿಂದ ಕಾಫಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕಾಫಿ ಉದ್ಯಮದ ಈ ಸಮಸ್ಯೆಗಳನ್ನು ವಿಭಾಗಗಳಾಗಿ ವಿಂಗಡಿಸಿದ್ದು, ಕಾರ್ಮಿಕರ ಕೊರತೆ, ರಸಗೊಬ್ಬರಗಳ ಬಳಕೆ, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ, ಕಚ್ಚಾ ವಸ್ತುಗಳು ದೊರೆಯದಿರುವುದು, ಮಾರುಕಟ್ಟೆ ವ್ಯವಸ್ಥೆ ಈ ರೀತಿಯ ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದೆ.
ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಕೂಡಲೇ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ನಲ್ಲಿ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಸಹಾಯ ಮಾಡಬೇಕು ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಸದಸ್ಯರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.