ಕರ್ನಾಟಕ

karnataka

ETV Bharat / state

ಚಿಕ್ಕಮಗಳೂರು ಜಿಲ್ಲೆ ಅಭಿವೃದ್ಧಿಗೆ 10.50 ಕೋಟಿ ರೂ. ಅನುದಾನ ಬಿಡುಗಡೆ: ಸಿ.ಟಿ. ರವಿ - Ct Ravi news

ಚಿಕ್ಕಮಗಳೂರು ಜಿಲ್ಲೆಯಲ್ಲಿ ದೇವರ ಮನೆ, ಹೇಮಾವತಿ ಉಗಮ ಸ್ಥಾನ, ಬಲ್ಲಾಳರಾಯನ ದುರ್ಗ ಸೇರಿದಂತೆ ವಿವಿಧೆಡೆ ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ನೀರಾವರಿ ಯೋಜನೆಗಳ ಪುನಶ್ಚೇತನಕ್ಕಾಗಿ 10.50 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸಿ.ಟಿ. ರವಿ ಹೇಳಿದರು.

CT Ravi
CT Ravi

By

Published : Aug 24, 2020, 5:30 PM IST

ಚಿಕ್ಕಮಗಳೂರು : ಮೂಡಿಗೆರೆ ಕ್ಷೇತ್ರದ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ವಿವಿಧ ಯೋಜನೆಗಳ ಅಡಿ 10.50 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು.

ಮೂಡಿಗೆರೆಯಲ್ಲಿ ತಾಲೂಕು ಪಂಚಾಯತಿಯ ವಿವಿಧ ನೂತನ ಕಟ್ಟಡಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ಮಲೆನಾಡು ಭಾಗವಾದ ಮೂಡಿಗೆರೆ ಕ್ಷೇತ್ರವು, ಅತಿವೃಷ್ಟಿ, ಭೂಕುಸಿತ ಸೇರಿದಂತೆ ಹಲವು ಸಂಕಷ್ಟಗಳಿಗೆ ಸಿಲುಕಿದ್ದು, ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಅತಿವೃಷ್ಟಿಯಿಂದ ಹಾನಿಗೊಳಗಾದ ರಸ್ತೆ, ಮನೆ, ಸೇತುವೆ ಸೇರಿದಂತೆ ಹಲವು ಕಾಮಗಾರಿಗಳಿಗಾಗಿ ವಿವಿಧ ಯೋಜನೆಗಳ ಅಡಿಯಲ್ಲಿ 271 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಮತ್ತು ಬೆಳೆ ನಷ್ಟ ಪರಿಹಾರಕ್ಕಾಗಿ 61 ಕೋಟಿ ರೂ. ಪರಿಹಾರ ಧನ ನೀಡಲಾಗಿದೆ ಎಂದರು.

ಇನ್ನು ಮನೆ ಕುಸಿತ ಉಂಟಾಗಿದ್ದ ವೇಳೆ ಸಮೀಕ್ಷೆ ನಡೆಸಿದ್ದು, ಶೇ. 75 ಕ್ಕಿಂತ ಹೆಚ್ಚು ಹಾನಿಗೊಳಗಾದ ಎ. ಮಾದರಿಯ ಮನೆಗಳಿಗೆ 5 ಲಕ್ಷ ರೂ. ಪರಿಹಾರ, ಶೇ.50 ರಷ್ಟು ಹಾನಿಯಾದ ಬಿ. ಮಾದರಿಯ ಮನೆಗಳಿಗೆ ರೂ. 3 ಲಕ್ಷ, ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರ ಪರಿಹಾರ ಧನ ವಿತರಿಸಲಾಗಿದೆ. ಬೆಳೆ ಹಾನಿಯಾಗಿ ನಷ್ಟವಾಗಿದ್ದಲ್ಲಿ ಎನ್.ಡಿ.ಆರ್.ಎಫ್ ನಿಯಮದನ್ವಯ ಬೆಳೆ ಪರಿಹಾರ ವಿತರಿಸಲಾಗಿದ್ದು, ಹೆಚ್ಚುವರಿಯಾಗಿ ರಾಜ್ಯಸರ್ಕಾರ 10 ಸಾವಿರ ಬೆಳೆ ನಷ್ಟ ಪರಿಹಾರ ನೀಡಿದೆ ಎಂದು ಹೇಳಿದರು.

ಇನ್ನು ಜಿಲ್ಲೆಯಲ್ಲಿ ದೇವರ ಮನೆ, ಹೇಮಾವತಿ ಉಗಮ ಸ್ಥಾನ, ಬಲ್ಲಾಳರಾಯನ ದುರ್ಗ, ಆಲ್ದೂರು ಸೇರಿದಂತೆ ವಿವಿಧೆಡೆ ಹಲವು ಅಭಿವೃದ್ಧಿ ಕಾರ್ಯಗಳಿಗಾಗಿ ಹಾಗೂ ನೀರಾವರಿ ಯೋಜನೆಗಳ ಪುನಶ್ಚೇತನಕ್ಕಾಗಿ 10.50 ಕೋಟಿಯಷ್ಟು ಅನುದಾನ ಬಿಡುಗಡೆಗೊಳಿಸಲಾಗಿದೆ. ಇತ್ತೀಚೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಜಿಲ್ಲೆಯಲ್ಲಿನ ಕಾಫಿ, ಮೆಣಸು, ಅಡಿಕೆ, ಏಲಕ್ಕಿ ಸೇರಿದಂತೆ ಹಲವು ಬೆಳೆಗಳ ಬೆಳೆಗಾರರು, ರೈತರ ಸಮಸ್ಯೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಅಭಿವೃದ್ಧಿ ದೃಷ್ಟಿಯಿಂದ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಕೇಂದ್ರ, ಮೂಡಿಗೆರೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆ, ಹೊಯ್ಸಳ ಸರ್ಕ್ಯೂಟ್ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ ಎಂದು ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ ರವಿ ಹೇಳಿದರು.

ABOUT THE AUTHOR

...view details