ಚಿಕ್ಕಬಳ್ಳಾಪುರ:ರೈತರು ರಾಷ್ಟ್ರದ ಜೀವಾತ್ಮ. ದೇಶದ ಜನತೆಗೆ ಪರಮಾತ್ಮನಾಗಿ ತುತ್ತು ಕೊಡುವ ಅನ್ನದಾತರು. ಆದರೆ ಪ್ರಜಾಪ್ರಭುತ್ವ ಸರ್ಕಾರದಲ್ಲಿ ಮಾತ್ರ ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸುತ್ತಿದ್ದಾರೆ ಎಂದು ಭಾನುವಾರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ನಡೆದ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಬೇಸರ ವ್ಯಕ್ತಪಡಿಸಿದರು.
ಚಿಂತಾಮಣಿ ನಗರದ ಎಪಿಎಂಸಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷ ಕದಿರೇಗೌಡರ ನೇತೃತ್ವದಲ್ಲಿ 16ನೇ ವಿಶ್ವ ರೈತರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ದೀಪ ಬೆಳಗಿಸುವುದರ ಮೂಲಕ ಚಾಲನೆ ಕೊಡಲಾಯಿತು. ಇದೇ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ವರಿಷ್ಠ ಗಂಗಾಧರ, ಸರ್ಕಾರ ರೈತರ ಮೇಲೆ ತೋರಿಸುತ್ತಿರುವ ಧೋರಣೆಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ರೈತರು, ಮುಖ್ಯವಾಗಿ ಸರ್ಕಾರ ಬಯಲುಸೀಮೆ ಪ್ರದೇಶದಲ್ಲಿ ಶಾಶ್ವತ ನೀರಾವರಿಯನ್ನು ಮೊದಲ ಆದ್ಯತೆ ಮೇಲೆ ಬಗೆಹರಿಸಬೇಕು. ಜಿಲ್ಲೆಯಲ್ಲಿ ಸಿಲ್ಕ್ ಮಿಲ್ಕ್ ಉದ್ಯೋಗ ಶಾಶ್ವತವಾಗಿ ಮಾಡಿಕೊಟ್ಟ ಉದ್ಯಮವಾಗಿದ್ದು ಇದಕ್ಕೆ ಬೇಕಾದ ಸೋಲಾರ್ ವಿದ್ಯುತ್ ಅನ್ನು ನೂರರಷ್ಟು ಸಬ್ಸಿಡಿ ಮೂಲಕ ಕೊಡಬೇಕಿದೆ. ರೈತರು ಬೆಳೆಯುವ ತರಕಾರಿಗೆ ಬೆಲೆ ನಿಗದಿಯಾಗಬೇಕೆಂದು ಒತ್ತಾಯಿಸಿದರು.
ಕೆಎಂಎಫ್ ಉಳಿಸಲು ಉಗ್ರ ಹೋರಾಟದ ಎಚ್ಚರಿಕೆ: ಭಾರತ ಸರ್ಕಾರ ಮೂರು ವಿರೋಧಿ ನೀತಿಗಳನ್ನು ಹಿಂಪಡೆದಿದೆ. ಆದರೆ ಸರ್ಕಾರ ಇನ್ನೂ ಜೀವಂತವಾಗಿ ಇಟ್ಟುಕೊಂಡಿದ್ದು ರೈತ ವಿರೋಧಿ ಸಂಸ್ಕೃತಿ ತೋರುತ್ತಿದ್ದಾರೆ ಎಂದು ಖಂಡಿಸಿದ್ದಾರೆ. ಕೆಎಂಎಫ್ ಸಂಸ್ಥೆಯನ್ನು ಗುಜರಾತ್‌ನ ಅಮೂಲ್ ನೊಂದಿಗೆ ವಿಲೀನವಾಗಲು ಕೇಂದ್ರ ಸಚಿವರು ಸೂಚನೆ ನೀಡಿದ್ದಾರೆ. ಆದರೆ ಕೆಎಂಎಫ್‌ಗೆ ತನ್ನದೇ ಆದ ಗೌರವ ಸ್ಥಾನ ಇದೆ. ಒಂದು ವೇಳೆ ಏಕಪಕ್ಷೀಯವಾಗಿ ನಿರ್ಧಾರ ತಗೆದುಕೊಂಡರೆ ಕೆಎಂಎಫ್ ಉಳಿಸಿಕೊಳ್ಳಲು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ಕೊಟ್ಟರು.
ವಿಶ್ವ ರೈತ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಜಿಲ್ಲಾಧ್ಯಕ್ಷ ಎಂ.ಆರ್.ಲಕ್ಷ್ಮಿ ನಾರಾಯಣ್ ಮಾತನಾಡಿ, ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ. ನಕಲಿ ಬಿತ್ತನೆ ಬೀಜ, ನಕಲಿ ಔಷಧಿ, ಮಾರುಕಟ್ಟೆಗಳ ಅವ್ಯವಸ್ಥೆ, ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದರೂ ಅತಿವೃಷ್ಠಿ ಇಲ್ಲಾ ಅನಾವೃಷ್ಟಿಗೆ ಸಿಲುಕಿ ರೈತರು ಪ್ರತಿವರ್ಷ ಸಂಕಷ್ಟಕ್ಕೆ ಸಿಲುಕಿ ನರಳಿ ಕಣ್ಣೀರಾಕುವ ಸ್ಥಿತಿ ಇದೆ ಎಂದರು.
ರೈತ ಸಂಘದ ರಾಜ್ಯ ವರಿಷ್ಠರಾದ ಕೆ.ಟಿ.ಗಂಗಾಧರ್, ಜಿಲ್ಲಾ ಸಮಿತಿಯ ಎಸ್.ವೆಂಕಟ ಸುಬ್ಬಾರೆಡ್ಡಿ, ತಾಲೂಕು ಅಧ್ಯಕ್ಷ ಕದಿರೇ ಗೌಡ ಹೆಚ್.ಎನ್, ರಾಜ್ಯ ವಲಯ ಮಟ್ಟದ ಅಧ್ಯಕ್ಷ ಜೆ.ವಿ.ರಘುನಾಥ ರೆಡ್ಡಿ, ಕೋಲಾರ ರಾಜ್ಯ ಉಪಾಧ್ಯಕ್ಷ ನಾರಾಯಣ ಗೌಡ, ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತಿಶ್, ವಿದ್ಯಾರ್ಥಿ ಯುವ ಘಟಕದ ಅಧ್ಯಕ್ಷ ಕೃಷ್ಣ, ಹಿರಿಯ ವಕೀಲ ಬಿ.ಆರ್.ದಯಾನಂದ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.
ಇದನ್ನೂ ಓದಿ:ಈ ದುಷ್ಟ ಭಸ್ಮಾಸುರನ ಕೈಗೆ ಈಗಲೇ ಬರೆ ಹಾಕದಿದ್ದರೆ ರೈತರು ಬೀದಿಪಾಲು: ಸಿದ್ದರಾಮಯ್ಯ