ಬಾಗೇಪಲ್ಲಿ: ಗಿಡ-ಮರ ಬೆಳೆಸುವುದರ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರಬೇಕು. ಈ ಮೂಲಕ ನಮ್ಮ ತನವನ್ನು ಉಳಿಸಿಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಪಂಕಜಾರೆಡ್ಡಿ ತಿಳಿಸಿದರು.
ನ್ಯಾಷನಲ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚಾರಣೆಯಲ್ಲಿ, ಗಿಡ ನೆಟ್ಟು ಅದಕ್ಕೆ ನೀರುಣಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಮಲೆನಾಡಿನ ಪ್ರದೇಶದಲ್ಲಿ ಪ್ರತಿ ಮನೆಯ ಮುಂದೆ ಗಿಡ-ಮರ ಬೆಳೆಸುವಲ್ಲಿ ಹೆಚ್ಚಿನ ಕಾಳಜಿ ತೋರಿಸಿ ಪರಿಸರ ಕಾಪಾಡುತ್ತಾರೆ. ಆದರೆ ತಾಲೂಕಿನಲ್ಲಿ ಪುರಸಭೆ ವತಿಯಿಂದ ನಾವೇ ಗಿಡ ಕೊಟ್ಟರೂ ಕೂಡಾ ಅದನ್ನು ನೆಟ್ಟು ಪೋಷಿಸಲು ಹಿಂದೇಟು ಹಾಕುತ್ತಾರೆ. ಈ ಬಗ್ಗೆ ಕೇಳಿದರೆ, ಇಲ್ಲಿ ನೀರಿನ ಅಭಾವ ಜಾಸ್ತಿ ಎಂದು ಹೇಳುತ್ತಾರೆ. ಆದರೆ ನಾವು ಪ್ರತಿನಿತ್ಯ ಕೈ ತೊಳೆಯುವಾಗ ಪೋಲು ಮಾಡುವ ನೀರನ್ನೇ ಗಿಡದ ಮೇಲೆ ಹಾಕಿದರೂ ಸಾಕು, ಹಾಗಾಗಿ ಇನ್ನಾದರೂ ಜಾಗೃತರಾಗಬೇಕು ಎಂದು ತಿಳಿಸಿದರು.