ಚಿಕ್ಕಬಳ್ಳಾಪುರ:ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಆ್ಯಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ದಾರಿ ಮಧ್ಯೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಬಾಗೇಪಲ್ಲಿ ತಾಲೂಕಿನ ಚೆನ್ನರಾಯಪಲ್ಲಿಯಲ್ಲಿ ನಡೆದಿದೆ.
ಆ್ಯಂಬುಲೆನ್ಸ್ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ - ಚಿಕ್ಕಬಳ್ಳಾಪುರ ಸುದ್ದಿ
ಆ್ಯಂಬುಲೆನ್ಸ್ನಲ್ಲೇ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ತಾಯಿ ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಚೆನ್ನರಾಯಪಲ್ಲಿ ಗ್ರಾಮದಲ್ಲಿ ಇಂದು ಬೆಳಗ್ಗೆ ಗ್ರಾಮದ ಅರುಣಾಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಬಾಗೇಪಲ್ಲಿ ಆಸ್ಪತ್ರೆಯ ಆ್ಯಂಬುಲೆನ್ಸ್ ಕರೆ ಮಾಡಿದ್ದಾರೆ. ಬಂದ ಆ್ಯಂಬುಲೆನ್ಸ್ನಲ್ಲಿ ಶುಶ್ರೂಷಕರನ್ನು ಬಿಟ್ಟರೆ ತಜ್ಞರು ಇರಲಿಲ್ಲ. ಗ್ರಾಮದಿಂದ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ದಾರಿ ಮಧ್ಯದಲ್ಲೇ ಅರುಣಾಗೆ ಹೆರಿಗೆ ನೋವು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಆ್ಯಂಬುಲೆನ್ಸ್ನಲ್ಲಿ ಅರುಣಾ ಪೋಷಕರು ತೀವ್ರ ಆತಂಕಗೊಂಡಿದ್ದರು. ಆದರೆ ಆ್ಯಂಬುಲೆನ್ಸ್ನಲ್ಲಿದ್ದ ಶುಶ್ರೂಷಕರೇ ಧೈರ್ಯ ಮಾಡಿ ಆ್ಯಂಬುಲೆನ್ಸ್ನಲ್ಲೇ ಹೆರಿಗೆ ಮಾಡಿಸಿದ್ದು, ಅರುಣಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ನಂತರ ತಾಯಿ ಮತ್ತು ಮಗುವನ್ನು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಶ್ರೂಷಕರಾದ ಮುರಳಿ ಹಾಗೂ ಶೀನಪ್ಪರನ್ನು ಎಲ್ಲರೂ ಅಭಿನಂದಿಸಿದ್ದಾರೆ.