ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಸಲ ಶೇ 76.76 ರಷ್ಟು ಮತದಾನವಾಗಿದೆ. ಆದರೆ, ಕೆಲವರು ವೋಟ್ ಮಾಡುತ್ತಿರುವ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಚುನಾವಣಾ ನಿಯಮಾವಳಿಗಳನ್ನು ಉಲ್ಲಂಘಿಸಿದ ಜನರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದೆ, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.
ವೈರಲ್ ಆಗಿವೆ ಮತದಾನದ ವಿಡಿಯೋಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಮತದಾರರಿಗೆ ಗುಪ್ತ ಮತದಾನದ ವ್ಯವಸ್ಥೆ ಕಲ್ಪಿಸಲಾಗಿದೆ. ಮತದಾರ ಯಾವ ಪಕ್ಷ ಅಥವಾ ವ್ಯಕ್ತಿಗೆ ಮತ ಹಾಕಿದರೂ ಅದು ಆತನಿಗೆ ಮಾತ್ರ ತಿಳಿದಿರಬೇಕು. ಅದೇ ಕಾರಣಕ್ಕೆ ಚುನಾವಣಾ ಆಯೋಗ ಪ್ರತಿಬಾರಿಯೂ ಗುಪ್ತ ಮತದಾನಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತದೆ. ಗುಪ್ತ ಮತದಾನವಾಗಬೇಕೆನ್ನುವ ಉದ್ದೇಶದಿಂದ ಮತಗಟ್ಟೆಯಲ್ಲಿಯೂ ಮತಯಂತ್ರಗಳು ಕಾಣದ ಹಾಗೆ ಮರೆಮಾಚಲಾಗುತ್ತದೆ.
ಅದರೆ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಕೆಲವರು ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ಮತ್ತೊಬ್ಬರಿಗೆ ತೋರಿಸುವ ಸಲುವಾಗಿ ಆ ದೃಶ್ಯಾವಳಿಗಳನ್ನು ಮೊಬೈಲ್ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ.
ಯುಪಿಪಿ ಅಭ್ಯರ್ಥಿ ಮುನಿರಾಜು ಮತದಾನದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ, ಪಕ್ಷದ ಕಾರ್ಯಕರ್ತರು ತಾವು ವೋಟ್ ಮಾಡಿದ ದೃಶ್ಯವನ್ನು ಸೆರೆ ಹಿಡಿದು ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್, ವಾಟ್ಸಾಪ್ ಗ್ರೂಪ್ಗಳಲ್ಲಿ ಶೇರ್ ಮಾಡುವ ಮೂಲಕ ನಿಯಮವನ್ನು ಗಾಳಿಗೆ ತೂರಿದ್ದಾರೆ.
ಚಿಕ್ಕಬಳ್ಳಾಪುರ ಲೊಕಸಭಾ ಕ್ಷೇತ್ರದಲ್ಲಿ ಈ ರೀತಿಯ ಸುಮಾರು 15ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದೆ. ಈ ಕುರಿತು ಸಾಕಷ್ಟು ದೂರುಗಳು ಬಂದರೂ ಜಿಲ್ಲಾಡಳಿತ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.