ಚಿಕ್ಕಬಳ್ಳಾಪುರ: ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರ ನೆರವಿನೊಂದಿಗೆ ಟವರ್ ನಿರ್ಮಾಣ ಮಾಡಿದ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೊಬೈಲ್ ಟವರ್ ತೆರವುಗೊಳಿಸುವಂತೆ ಆಗ್ರಹಿಸಿ ಭಕ್ತರಹಳ್ಳಿ ಗ್ರಾಮದ ದಲಿತರು ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ್ರು. ನಂತರ ಪೊಲೀಸರ ಸರ್ಪಗಾವಲಿನಲ್ಲಿ ಟವರ್ ನಿರ್ಮಾಣ ಮಾಡಲಾಯಿತು. ಕಳೆದ 5 ತಿಂಗಳುಗಳ ಹಿಂದೆ ಇದೇ ಟವರ್ ನಿರ್ಮಾಣವನ್ನು ತಡೆಯುವ ಸಲುವಾಗಿ ಮೊಬೈಲ್ ಟವರ್ ಏರಿ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಈಗ ಮತ್ತೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇನ್ನು ಶಾಲೆಗಳು, ಆಸ್ಪತ್ರೆಗಳು ಹಾಗೂ ಜನವಸತಿ ಪ್ರದೇಶಗಳ ಸಮೀಪ ಟವರ್ ನಿರ್ಮಿಸದಂತೆ ಸುಪ್ರೀಂ ಆದೇಶವಿದೆ. ಹಾಗಾಗಿ ಗ್ರಾಮಸ್ಥರು ಮತ್ತೆ ಪ್ರತಿಭಟನೆ ನಡೆಸಿ ಟವರ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮೊಬೈಲ್ ಟವರ್ ತೆರವುಗೊಳಿಸಲು ಗ್ರಾಮಸ್ಥರ ಆಗ್ರಹ ಇನ್ನು ಟವರ್ ನಿರ್ಮಾಣದ ಪಕ್ಕದಲ್ಲೇ ಶಾಲೆ ಇರುವ ಕಾರಣ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಲಿದ್ದು, ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ. ಮನೆಗಳ ಪಕ್ಕದಲ್ಲೇ ಮೊಬೈಲ್ ಟವರ್ ನಿರ್ಮಾಣವಾಗುತ್ತಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಮೊಬೈಲ್ ಟವರ್ ಬಳಿ ಪ್ರತಿಭಟನೆಗೆ ಮುಂದಾಗಲು ಪೊಲೀಸರು ಬಿಡದ ಕಾರಣ ನಗರದ ತಾಲೂಕು ಕಚೇರಿ ಬಳಿ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆಗೆ ಮುಂದಾದ್ರು. ಮೊಬೈಲ್ ಟವರ್ಅನ್ನು ಗ್ರಾಮದಿಂದ ದೂರ ಸ್ಥಳಾಂತರ ಮಾಡಬೇಕು ಎಂದು ಇಲ್ಲಿನ ನಿವಾಸಿಗಳು ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೇಡ್ 2 ತಹಶೀಲ್ದಾರ್ ಹನುಮಂತ ರಾವ್, ಟವರ್ ನಿರ್ಮಾಣಕ್ಕೆ ಮಧ್ಯಂತರವಾಗಿ ಯಾವುದೇ ಅಡಚಣೆ ಮಾಡಬಾರದು. ಸೂಕ್ತ ದಾಖಲೆಗಳಿದ್ದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ನ್ಯಾಯಾಲಯ ಆದೇಶ ಮಾಡಿದೆ. ಅದರಂತೆ ಟವರ್ ನಿರ್ಮಾಣ ಕಾರ್ಯ ಮಾಡಲಾಗಿದೆ ಎಂದಿದ್ದಾರೆ.