ಚಿಕ್ಕಬಳ್ಳಾಪುರ: ಕುಶಾವತಿ ನದಿಯಲ್ಲಿ (Kushavati River) ದ್ವಿಚಕ್ರ ವಾಹನ ಸಮೇತ ಕೊಚ್ಚಿ ಹೋಗುತ್ತಿದ್ದ ತಂದೆ - ಮಗನನ್ನು ಯುವಕನೊಬ್ಬ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೊಸವುಡ್ಯ ಗ್ರಾಮದ ಬಳಿ ನಡೆದಿದೆ.
ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ವ್ಯಕ್ತಿ, ತನ್ನ ಮಗನ ಜೊತೆ ಚೇಳೂರು ಸಮೀಪದ ಚಾಕವೇಲು ಗ್ರಾಮದಲ್ಲಿ ನಡೆಯುತ್ತಿದ್ದ ಸಂಬಂಧಿಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಆದರೆ, ಭಾರಿ ಪ್ರಮಾಣದಲ್ಲಿ ಮಳೆಯಾದ ಕಾರಣ ಕುಶಾವತಿ ನದಿ ಅಪಾಯಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಆಯತಪ್ಪಿ ತಂದೆ-ಮಗ ನದಿ ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ.
ದ್ವಿಚಕ್ರ ವಾಹನ ಸಮೇತ ಇಬ್ಬರು ನೀರಿನಲ್ಲಿ ಬಿದ್ದಿದ್ದನ್ನು ಕಂಡ ಸುತ್ತಮುತ್ತಲಿನ ಜಮೀನುಗಳಿದ್ದ ಜನರು ಕೂಗಿ ಕೊಂಡಿದ್ದಾರೆ. ಅಲ್ಲಿಯೇ ಇದ್ದ ಮಾರುತಿ ಎಂಬ ಯುವಕ, ತಕ್ಷಣ ಇವರ ನೆರವಿಗೆ ಧಾವಿಸಿ, ನೀರಿನ ರಭಸವನ್ನು ಲೆಕ್ಕಿಸದೇ ಸ್ನೇಹಿತರ ಸಹಾಯದಿಂದ ತಂದೆ - ಮಗ ಜೊತೆ ವಾಹನವನ್ನು ರಕ್ಷಣೆ ಮಾಡಿದ್ದಾರೆ.