ಚಿಕ್ಕಬಳ್ಳಾಪುರ : ಅಕ್ರಮವಾಗಿ ಎರಡು ತಲೆ ಹಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಗೌರಿಬಿದನೂರು ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಗಸಂದ್ರದ ನರಸಿಂಹ (19) ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್‌ನ ಅನಿಲ್ (22) ಹಾಗೂ ಗಂಗಸಂದ್ರ ನಿವಾಸಿ ಹರೀಶ್ (22) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.
ಗ್ರಾಮಾಂತರ ಠಾಣೆಯ ಪಿಎಸ್ಐ ಮೋಹನ್ ಅವರು ಚಂದನದೂರು ಬಳಿ ಗಸ್ತಿನಲ್ಲಿರುವಾಗ ಆರೋಪಿಗಳು ಅನುಮಾನಾಸ್ಪದವಾಗಿ ಬ್ಯಾಗನ್ನು ಇಟ್ಟುಕೊಂಡು ನಿಂತಿದ್ದರು. ಇದನ್ನು ಗಮನಿಸಿ ವಿಚಾರಣೆಗೆ ಮುಂದಾದಾಗ, ಗಾಬರಿಯಾದ ಯುವಕರು ತಪ್ಪಿಸಿಕೊಳ್ಳಲು ಯತ್ನಿಸಿದರು.ಈ ವೇಳೆ ಪಿಎಸ್ಐ ಮೋಹನ್ ಹಾಗೂ ತಂಡ ಯುವಕರನ್ನು ಬೆನ್ನಟ್ಟಿ ನೋಡಿದಾಗ ಬ್ಯಾಗಿನಲ್ಲಿ ಎರಡು ತಲೆಯ ಹಾವು ಇರುವುದು ಕಂಡು ಬಂದಿದೆ.
ಗೌರಿಬಿದನೂರಿನಲ್ಲಿ ಎರಡು ತಲೆ ಹಾವಿನ ಮಾರಾಟಕ್ಕೆ ಯತ್ನ ಹಣದ ಆಸೆಗೆ ಬಿದ್ದು ಎರಡು ತಲೆ ಹಾವನ್ನು ಮಾರಾಟ ಮಾಡುತ್ತಿರುವುದಾಗಿ ತಿಳಿದು ಬಂದಿದ್ದು, ಸದ್ಯ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.