ಚಿಕ್ಕಬಳ್ಳಾಪುರ : ಉಕ್ರೇನ್ನಲ್ಲಿ ಯುದ್ಧದ ಕಾರ್ಮೋಡ ಆವರಿಸಿದ್ದು, ಅಲ್ಲಿನ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ ಜಿಲ್ಲೆಯ 10ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರದಾಡುತ್ತಿದ್ದು, ಜಿಲ್ಲೆಯ ಗುಡಿಬಂಡೆಯ ಇಬ್ಬರು ಯುವಕರು ಸೇರಿದ್ದಾರೆ ಎಂದು ತಿಳಿದುಬಂದಿದೆ.
ಎಂಬಿಬಿಎಸ್ ವ್ಯಾಸಂಗಕ್ಕಾಗಿ ಜಿಲ್ಲೆಯ ವಿದ್ಯಾರ್ಥಿಗಳು ತೆರಳಿದ್ದು, ವಿದ್ಯಾಭ್ಯಾಸ ಮಾಡುತ್ತಿದ್ದರು. ಆದರೆ ಯುದ್ಧದಿಂದ ವಿದ್ಯಾರ್ಥಿಗಳ ಪೋಷಕರು ಭಯಭೀತರಾಗಿದ್ದು, ಆದಷ್ಟು ಬೇಗ ಮಕ್ಕಳನ್ನು ವಾಪಸ್ ಕರೆ ತರುವಂತೆ ಮನವಿ ಮಾಡಿಕೊಂಡಿದ್ದಾರೆ. ಗುಡಿಬಂಡೆ ತಾಲೂಕಿನ ಲಕ್ಷ್ಮೀಸಾಗರದ ನವನೀತ್ ಕುಮಾರ್ ಮತ್ತು ಕಂಬಾಲಹಳ್ಳಿಯ ನಂದ ಪ್ರಸಾದ್ಉಕ್ರೇನ್ನಲ್ಲಿ ಸಿಲುಕಿದ್ದಾರೆ.
ಧೈರ್ಯ ತುಂಬಿದ ತಹಶೀಲ್ದಾರ್:ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ಗುಡಿಬಂಡೆ ವಿದ್ಯಾರ್ಥಿಗಳನ್ನು ತಹಶೀಲ್ದಾರ್ ಸಿಬ್ಗತ್ ವುಲ್ಲಾ ಸಂಪರ್ಕಿಸಿದ್ದು, ಯುವಕರ ಆರೋಗ್ಯ ಸೇರಿದಂತೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಇದೇ ವೇಳೆ ಯುವಕರಿಗೆ ಧೈರ್ಯ ತುಂಬಿದ್ದಾರೆ ಎಂದು ತಾಲೂಕು ಆಡಳಿತ ಮೂಲಗಳು ಮಾಹಿತಿ ನೀಡಿವೆ.