ಹೊಸ ವರ್ಷಕ್ಕೆ ಚಿಕ್ಕಬಳ್ಳಾಪುರದ ಜನಪ್ರಿಯ ಗಿರಿಧಾಮ ನಂದಿಬೆಟ್ಟದಲ್ಲಿ ಜನಜಾತ್ರೆ ಚಿಕ್ಕಬಳ್ಳಾಪುರ:ಪ್ರವಾಸಿಗರ ನೆಚ್ಚಿನ ತಾಣ ಇಲ್ಲಿನ ನಂದಿ ಗಿರಿಧಾಮದಲ್ಲಿ ನೂತನ ವರ್ಷಾಚರಣೆಗೆ ನಿನ್ನೆ 15 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಿದ್ದರು. ಹೀಗಾಗಿ, ಸುಮಾರು 4 ಗಂಟೆಗೂ ಅಧಿಕ ಸಮಯ ಟ್ರಾಫಿಕ್ ಸಮಸ್ಯೆಯಿಂದ ಸವಾರರು ಪರದಾಡಿದ್ದಾರೆ.
ವೀಕೆಂಡ್ ಜೊತೆಗೆ ನೂತನ ವರ್ಷವೂ ಸಹ ಭಾನುವಾರದಂದೇ ಬಂದಿದ್ದು ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಾಗಿತ್ತು. ಹೊಸ ವರ್ಷ ಅಲ್ಲದೇ ಇದ್ದರೂ ವೀಕೆಂಡ್‌ನಲ್ಲಿ ನಂದಿ ಹಿಲ್ಸ್‌ಗೆ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು, ಪ್ರಕೃತಿ ಪ್ರೇಮಿಗಳು ಭೇಟಿ ನೀಡುತ್ತಿರುತ್ತಾರೆ.
ಆದರೆ ನೂತನ ವರ್ಷಾಚರಣೆಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬೆಟ್ಟಕ್ಕೆ ಭೇಟಿ ನೀಡಿದ್ದರು. ಹೀಗಾಗಿ ಐದಾರು ಕಿಲೋಮೀಟರ್‌ನಷ್ಟು ಟ್ರಾಫಿಕ್ ಜಾಮ್ ಉಂಟಾಗಿ ಸವಾರರು ಸಂಕಟ ಅನುಭವಿಸಿದ್ದಾರೆ. ಟ್ರಾಫಿಕ್ ಸಮಸ್ಯೆ ನಿವಾರಿಸಲು ಪೊಲೀಸರು ಹರಸಾಹಸಪಟ್ಟರು.
ಬೆಟ್ಟದ ಬುಡದಿಂದ ತುದಿಯವರೆಗೂ ಪೊಲೀಸ್ ಇಲಾಖೆ ಬಂದೋಬಸ್ತ್ ಏರ್ಪಡಿಸಿ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಿತ್ತು. ಇನ್ನು ಸುತ್ತಮುತ್ತಲಿನ ನಂದಿ ದೇವಸ್ಥಾನ, ಚಿಂತಾಮಣಿ ತಾಲೂಕಿನ ಕೈವಾರ ಕ್ಷೇತ್ರ, ಕೈಲಾಸಗಿರಿ, ಅಂಬಾಜಿದುರ್ಗ ಬೆಟ್ಟ, ಗುಡಿಬಂಡೆ ಕೋಟೆ ಸೇರಿದಂತೆ ಬಹುತೇಕ ಪ್ರವಾಸಿ ತಾಣಗಳು ನಿನ್ನೆ ಪ್ರವಾಸಿಗರಿಂದ ತುಳುಕುತ್ತಿದ್ದವು.
ಇದನ್ನೂ ಓದಿ:ವೀಕೆಂಡ್, ಇಯರ್ ಎಂಡ್.. ಕೊಡಗಿನಲ್ಲಿ ಪ್ರವಾಸಿಗರ ದಂಡು