ಚಿಕ್ಕಬಳ್ಳಾಪುರ:ಜಿಲ್ಲೆಯ ಗೌರಿಬಿದನೂರು ತಾಲೂಕಿನ ತೊಂಡೆಭಾವಿ ರೈಲ್ವೆ ನಿಲ್ದಾಣದ ಸಮೀಪಹಳಿ ಮೇಲೆ ಛಿದ್ರಗೊಂಡ ರೀತಿಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿವೆ. ಅಂದಾಜು 45 ವರ್ಷದ ಪುರುಷ ವ್ಯಕ್ತಿ ಮತ್ತು ಅಂದಾಜು 35-25 ವರ್ಷದ ಇಬ್ಬರು ಮಹಿಳೆಯರ ಮೃತದೇಹಗಳೆಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮೃತದೇಹಗಳ ಬಗ್ಗೆ ಹೆಚ್ಚು ವಿವರ ದೊರೆತಿಲ್ಲ. ಮೃತ ವ್ಯಕ್ತಿಯ ಶರ್ಟ್ ಮೇಲೆ ವಿನಾಯಕ ಟೈಲರ್ ಗೌರಿಬಿದನೂರು ಎಂಬ ಗುರುತಿದೆ. ಒಂದೇ ಕುಟುಂಬದ ಸದಸ್ಯರಾಗಿರುವ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆಯ ಪೊಲೀಸರು ಹಾಗೂ ರೈಲ್ವೆ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಶವಾಗಾರಕ್ಕೆ ರವಾನಿಸಿರುವ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮೂವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಇನ್ನಷ್ಟು ಮಾಹಿತಿ ತಿಳಿದು ಬರಬೇಕಿದೆ.