ಚಿಕ್ಕಬಳ್ಳಾಪುರ: ಮತದಾರರನ್ನು ಎಬಿಸಿಡಿ ಎಂದು ವರ್ಗೀಕರಿಸಿದ್ದೇವೆ, ನಮ್ಮ ಮತದಾರರನ್ನು ಕೆರೆತಂದು ಓಟ್ ಮಾಡಿಸುವ ಕೆಲಸ ನಾವು ಮಾಡುತ್ತೇವೆ ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿ ಮಹಿಳಾ ಮೋರ್ಚಾ ಸಭೆಯ ಬಳಿಕ ಮಾತನಾಡಿ, ಮತದಾರರನ್ನು ನಾವು ಎಬಿಸಿಡಿ ಎಂದು ನಾಲ್ಕು ಗುಂಪುಗಳಾಗಿ ವರ್ಗೀಕರಿಸಿದ್ದೇವೆ. ಎ- ಅಂದರೆ ಪಕ್ಕಾ ಬಿಜೆಪಿ ಮತಗಳು, ಬಿ- ಅಂದರೆ ಇನ್ನೂ ತೀರ್ಮಾನವಾಗದಿರುವ ಮತಗಳು, ಸಿ -ಅಂದರೆ ಕಾಂಗ್ರೆಸ್ ಮತಗಳು, ಡಿ- ಅಂದರೆ ಜೆಡಿಎಸ್ ಮತಗಳು. ಆದ್ದರಿಂದ ನಮ್ಮ ಮತದಾರರು ಯಾರು ಎಂದು ನಮಗೆ ಗೊತ್ತಿದೆ. ಅವರನ್ನು ಕೆರೆತಂದು ಮತದಾನ ಮಾಡಿಸುವ ಜವಬ್ದಾರಿ ನಮ್ಮದು ಎಂದರು.
ಇನ್ನು ಮಾಜಿ ಸಿಎಂಗಳಾದ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಸ್ವಂತ ಕ್ಷೇತ್ರಗಳಲ್ಲೇ ಅವರು ಲೂಸರ್ಸ್ ಆಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ತಮ್ಮ ತಂದೆಯವರನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಮಂಡ್ಯದಲ್ಲಿ ತಮ್ಮ ಮಗನನ್ನೂ ಗೆಲ್ಲಿಸಿಕೊಳ್ಳಲು ಆಗ್ಲಿಲ್ಲಾ. ತಮ್ಮ ಭದ್ರಕೋಟೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಮುಂದೆ ಸೋಲಬೇಕಾಯ್ತು. ಅಂತವರು ಚಿಕ್ಕಬಳ್ಳಾಪುರದಲ್ಲಿ ಏನು ತಿರುವಿ ಹಾಕ್ತಾರೆ. ರಾಗಿ ಮುದ್ದೇನೂ ತಿರುವಿ ಹಾಕಲು ಅವರಿಂದ ಆಗಲ್ಲ ಎಂದು ಲೇವಡಿ ಮಾಡಿದರು.
ಇನ್ನು ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೂ ಸೋತ್ರು, ಚಾಮುಂಡೇಶ್ವರಿ ಕ್ಷೇತ್ರ ಸಿದ್ದರಾಮಯ್ಯ ಅವರ ಕರ್ಮ ಭೂಮಿ, ಅಲ್ಲೇ ಸೋತ್ರು, ಬಾದಾಮಿಯಲ್ಲೂ ಲೀಡ್ ಉಳಿಸ್ಕೊಳ್ಳಲು ಆಗಲಿಲ್ಲ. ಇಲ್ಲಿ ಬಂದು ಹಾವ ಭಾವ ತೋರಿಸಿ ಹೋಗ್ತಾರೆ ಅಷ್ಟೆ. ಚಿಕ್ಕಬಳ್ಳಾಪುರದಲ್ಲಿ ಭಾಷಣ ಮಾಡಿ ಜನರಿಗೆ ಮನರಂಜನೆಯನ್ನಷ್ಟೇ ನೀಡಬಹುದು. ಸಿದ್ದರಾಮಯ್ಯ ಅವರ ಮನರಂಜನೆಗೆ ಓಟು ಬೀಳಲ್ಲ, ಜನ ಕೇಕೆ, ಚಪ್ಪಾಳೆ ಹಾಕಬಹುದಷ್ಟೇ ಎಂದು ವಾಗ್ದಾಳಿ ನಡೆಸಿದರು.