ಚಿಕ್ಕಬಳ್ಳಾಪುರ:ರೈಲ್ವೆ ಹಳಿಯಿಂದ ಸುಮಾರು 200 ಅಡಿಗಳ ದೂರದಲ್ಲಿ ಒಡಿಶಾ ಮೂಲದ ವ್ಯಕ್ತಿಯೋರ್ವನ ಶವವೊಂದು ಮಂಗಳವಾರ ಜಿಲ್ಲೆಯ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡಕುರುಗೋಡು ಕೆರೆಯ ಬಳಿ ಪತ್ತೆಯಾಗಿದೆ.
ಅನುಮಾನಾಸ್ಪದ ರೀತಿಯಲ್ಲಿ ಒಡಿಶಾ ಮೂಲದ ವ್ಯಕ್ತಿ ಸಾವು ಮೃತ ವ್ಯಕ್ತಿಯನ್ನು ಒಡಿಶಾ ಮೂಲದ ಸಂದರ್‌ಗರ್ ಜಿಲ್ಲೆಯ ಕಿರಲಾಗ ಮೂಲದ ಬಿಕಾಶಾ ಕೆರೆಕಟ್ಟ (27) ಎಂದು ಗುರುತಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಬಾಗಿಲಲ್ಲಿ ಕೂತಿದ್ದ ವೇಳೆ ಆಯಾತಪ್ಪಿ ನಿದ್ದೆಯ ಮಂಪರಿನಲ್ಲಿ ಬಿದ್ದಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಸ್ಥಳಕ್ಕೆ ಯಶವಂತ ಪುರ ರೈಲ್ವೆ ಪೊಲೀಸ್, ಎಎಸ್ಐ ವಸಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗೊಂದಲದ ಗೂಡಾದ ಪ್ರಕರಣ
ರೈಲ್ವೆ ಹಳಿಯ ಮೇಲೆ ಹಾಗೂ ಹಳ್ಳಿಯ ಸುತ್ತಮುತ್ತ ರಕ್ತದ ಕಲೆಗಳಿದ್ದು, ಮೃತದೇಹ ಹಳಿಯಿಂದ ಸುಮಾರು 200 ಅಡಿಗಳ ದೂರದಲ್ಲಿ ಬಿದ್ದಿರುವುದು ಹಾಗೂ ರೈಲಿನಿಂದ ಬಿದ್ದ ವ್ಯಕ್ತಿಯ ತೀವ್ರ ಗಾಯಗಳಿಂದ ನರಳುತ್ತಾ ರಸ್ತೆ ಮೂಲಕ ಬಂದು ದೊಡ್ಡಕುರುಗೋಡು ಕೆರೆಯಂಗಳದ ಬಳಿ ಬಿದ್ದು ಸಾವನ್ನಪ್ಪಿರುವ ಬಗ್ಗೆ ಗ್ರಾಮಾಂತರ ಠಾಣೆಯ ಎಸ್ಐ ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ರೈಲ್ವೆ ಪೊಲೀಸರು ಹಾಗೂ ಗ್ರಾಮಾಂತರ ಪೊಲೀಸರ ನಡುವೆ ಕೆಲ ಹೊತ್ತು ಗೊಂದಲ ಏರ್ಪಟ್ಟು ನಂತರ ಗ್ರಾಮಾಂತರ ಠಾಣಾ ಪೊಲೀಸರು ಮೃತದೇಹವನ್ನು ಸಾರ್ವಜನಿಕ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.