ಚಿಕ್ಕಬಳ್ಳಾಪುರ : ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಚಿನ್ನದಂಗಡಿಗೆ ಬಂದು ಸಂಬಂಧಪಡದ ವ್ಯಕ್ತಿಯನ್ನು ವಿಚಾರಣೆಗೆ ಹಾಜರಾಗುವಂತೆ ಕಿರುಕುಳ ನೀಡಿದ್ದಕ್ಕೆ ಸ್ಥಳೀಯರು ಇಬ್ಬರು ಪೊಲೀಸರು ಹಾಗೂ ಖಾಸಗಿ ವ್ಯಕ್ತಿಯನ್ನು ಕೂಡಿ ಹಾಕಿರುವ ಘಟನೆ ನಡೆದಿದೆ.
ತಮಿಳುನಾಡಿನ ಪರತ್ತೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಮಣಿ, ಹೆಡ್ ಕಾನ್ಸ್ಟೇಬಲ್ ವಾಸುದೇವ್ ಅವರು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳನನ್ನು ಕರೆದುಕೊಂಡು, ಜೊತೆಗೆ ಕನ್ನಡ ಭಾಷೆ ಬಲ್ಲ ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಚಿಕ್ಕಬಳ್ಳಾಪುರದ ಚಿನ್ನದಂಗಡಿ ಮಾಲಿಕ ಅಥುಲ್ ನನ್ನು ಹುಡುಕಿಕೊಂಡು ಬಂದಿದ್ದಾರೆ.
ತಮಿಳುನಾಡು ಪೊಲೀಸರಿಂದ ಕಿರುಕುಳ ಆರೋಪ :ಆದರೆ, ಈ ಹಿಂದೆ ಹಲವು ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಇದೇ ರೀತಿ ಪೊಲೀಸರು ಹಲವು ಬಾರಿ ಬಂದು ಕಿರುಕುಳ ನೀಡಿದ್ದಕ್ಕೆ ನಷ್ಟ ಉಂಟಾಗಿ ಹಲವು ತಿಂಗಳ ಹಿಂದೆ ಅಥುಲ್ ಅಂಗಡಿ ಮಾರಿಬಿಟ್ಟು ಊರು ತೊರೆದಿದ್ದ. ಆದರೆ ಪೊಲೀಸರು ಆತನ ಮಾವ ಶ್ರೀನಿವಾಸರನ್ನು ಹಿಡಿದುಕೊಂಡು ವಿಚಾರಣೆಗೆ ಬರುವಂತೆ ಧಮ್ಕಿ ಹಾಕಿದ್ದರಂತೆ.