ಚಿಕ್ಕಬಳ್ಳಾಪುರ: ರಾಜ್ಯ ಬಜೆಟ್ ಘೋಷಣೆಯಾದ ಮೇಲೆ ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ಕೊಡಬಹುದಿತ್ತು. ಆದರೆ ಬಜೆಟ್ ಘೋಷಣೆಗೂ ಮುನ್ನವೇ ಕಿವಿ ಮೇಲೆ ಕೇಸರಿ ಹೂ ಇಟ್ಟುಕೊಂಡು ಬಂದು ಅಪಹಾಸ್ಯ ಮಾಡಿರುವುದು ಖಂಡನೀಯ. ಇದು ಕಾಂಗ್ರೆಸ್ನವರ ದಿವಾಳಿತನವನ್ನು ತೋರಿಸುತ್ತದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ಗೂ ಮುನ್ನವೇ ಕಿವಿ ಮೇಲೆ ಕೇಸರಿ ಹೂ ಮುಡಿದಿದ್ದು ಕಾಂಗ್ರೆಸ್ನವರ ದಿವಾಳಿತನವನ್ನ ತೋರಿಸುತ್ತದೆ. 75 ವರ್ಷದ ರಾಜಕೀಯದಲ್ಲಿ ಯಾರು ಈ ರೀತಿ ಮಾಡಿರಲಿಲ್ಲ. ಬಜೆಟ್ ಅಪಹಾಸ್ಯ ಮಾಡಿದ ಕುಖ್ಯಾತಿಗೆ ಕಾಂಗ್ರೆಸ್ನವರು ಗುರಿಯಾಗಿದ್ದಾರೆ ಎಂದು ವಿರೋಧ ಪಕ್ಷಕ್ಕೆ ಟಾಂಗ್ ಕೊಟ್ಟರು.
ಇದನ್ನೂ ಓದಿ:ಕಿವಿಗೆ ಹೂವು ಮೂಡಿದು ಬಂದ ಕಾಂಗ್ರೆಸ್ ಸದಸ್ಯರು.. ಬಜೆಟ್ ವೇಳೆ ಆಕ್ರೋಶ ವ್ಯಕ್ತಪಡಿಸಿದ ಕೈ ನಾಯಕರು
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ: ಕಾಂಗ್ರೆಸ್ ಪಕ್ಷದ ವತಿಯಿಂದ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ವಿತರಣೆ ಮಾಡುತ್ತಿರುವ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿದ ಸಚಿವ ಸುಧಾಕರ್, ಕಾಂಗ್ರೆಸ್ನವರಿಗೆ ಅವರ ಮೇಲೆಯೇ ಅವರಿಗೆ ಗ್ಯಾರಂಟಿ ಇಲ್ಲ. ಅದಕ್ಕಾಗಿಯೇ ಕಾರ್ಡ್ ಮೇಲೆ ಸಹಿ ಮಾಡಿ ಗ್ಯಾರಂಟಿ ಕೊಡ್ತಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಶೇಕಡಾ 99 % ಬಜೆಟ್ ಅನುಷ್ಠಾನವೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದ್ರೆ ಅವರು ಸಿಎಂ ಆಗಿದ್ದಾಗ ಕೇವಲ 38 ಪರ್ಸೆಂಟ್ ಮಾತ್ರ ಯೋಜನೆಗಳನ್ನು ಈಡೇರಿಸಿದ್ದರು. ಈ ಕುರಿತು ನಾನು ಸದನದಲ್ಲಿ ಚರ್ಚೆ ಮಾಡುತ್ತೇನೆ ಎಂದರು.